ಕೋಲ್ಕತಾ: ಪಶ್ಚಿಮಬಂಗಾಳದ ಆರ್ ಜಿ ಕರ್ ಮೆಡಿಕಲ್ ಆಸ್ಪತ್ರೆಗೆ ಸಾವಿರಾರು ಮಂದಿ ನುಗ್ಗಿ ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಕೋಲ್ಕತಾ ಹೈಕೋರ್ಟ್ ಶುಕ್ರವಾರ (ಆಗಸ್ಟ್ 16) ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಆಗಸ್ಟ್ 9ರಂದು 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಘಟನೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆ ಆವರಣದೊಳಕ್ಕೆ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದ ಪ್ರಕರಣದ ಬಗ್ಗೆ ಹೈಕೋರ್ಟ್ ಚೀಫ್ ಜಸ್ಟೀಸ್ ಟಿಎಸ್ ಶಿವಜ್ಞಾನಂ ಮತ್ತು ಜಸ್ಟೀಸ್ ಎಚ್.ಭಟ್ಟಾಚಾರ್ಯ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.
ಪಶ್ಚಿಮಬಂಗಾಳ ಸರ್ಕಾರದ ಪರ ವಕೀಲರು, ಧ್ವಂಸಗೊಳಿಸಿದ ಘಟನೆ ವೇಳೆ ಕನಿಷ್ಠ 7 ಸಾವಿರ ಜನರು ಅಲ್ಲಿರುವುದಾಗಿ ಪೀಠಕ್ಕೆ ಮಾಹಿತಿ ನೀಡಿದ್ದರು. ಆಗ ಕೋರ್ಟ್, ಒಂದು ವೇಳೆ ಏಳು ಸಾವಿರ ಜನ ಬಂದಿದ್ದರೆ, ಅವರು ನಡೆದುಕೊಂಡು ಬಂದಿಲ್ಲವೇ ಎಂದು ಕಟುವಾಗಿ ಪ್ರಶ್ನಿಸಿ, ಇದೊಂದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಛೀಮಾರಿ ಹಾಕಿತ್ತು.
ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಾರೆ ಎಂದಾದಲ್ಲಿ ಆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಲ್ಲಿರಬೇಕು. ಒಂದು ವೇಳೆ 7,000 ಜನರು ನುಗ್ಗುತ್ತಾರೆಂದರೆ, ಇದನ್ನು ನಂಬಲು ಕಷ್ಟವಾಗುತ್ತಿದೆ. ಇದು ರಾಜ್ಯ ಸರ್ಕಾರದ ಪ್ರಮಾದವಲ್ಲವೇ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.