Advertisement

ಶಿವಗಂಗೆ ಬೆಟ್ಟ ಟ್ರೆಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಜಾಗ

09:39 PM Jun 14, 2021 | Team Udayavani |

ನಿಮಗೆ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಮಾಡಬೇಕು ಅನ್ನಿಸ್ತಿದ್ಯಾ.. ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗಿನದ್ದನ್ನು ಪಕ್ಷಿ ನೋಟ ನೋಡಬೇಕು ಎಂಬ ಆಸೆ ಇದ್ಯಾ.. ಒಂದು ದಿನದ ಪ್ರವಾಸ ಕೈಗೊಂಡು ಎಂಜಾಯ್ ಮಾಡಬೇಕು ಅಂತ ಅನ್ನಿಸ್ತಿದ್ಯಾ.. ಹಾಗಾದ್ರೆ ಈ ಜಾಗ ನಿಮಗೆ ಹೇಳಿ ಮಾಡಿಸಿದಂತಿದೆ. ಹಾಗಾದ್ರೆ ಆ ಜಾಗ ಯಾವುದು ಅಂದ್ರಾ.. ಅದೇ ತುಮಕೂರಿಗೆ ಸಮೀಪ ಇರುವ ಶಿವಗಂಗೆ ಬೆಟ್ಟ.

Advertisement

ಟ್ರೆಕ್ಕಿಂಗ್ ಹೋಗುವವರಿಗೆ ಹೇಳಿ ಮಾಡಿಸಿದ ಜಾಗ

ಹೌಡು ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಶಿವಗಂಗೆ/ಶಿವಗಂಗಾ ಸ್ಥಳವು ಯುವಕ ಯುವತಿಯರಿಗೆ, ಹಿರಿಯರಿಗೆ ಧಾರ್ಮಿಕ ಆಕರ್ಷಣೆಯಾಗಿದ್ದರೆ, ಯುವಜನಾಂಗದವರಿಗೆ ಟ್ರೆಕ್ಕಿಂಗ್ ಮಾಡಬಹುದಾದ ರೊಮಾಂಚಕ ತಾಣವಾಗಿದೆ. ಹೌದು, ಈ ಬೆಟ್ಟವನ್ನು ಏರಬಹುದಾಗಿದ್ದು ಪರ್ವತಾರೋಹಣ ಬಯಸುವವರಿಗೆ ಆದರ್ಶಮಯ ಸ್ಥಳವಾಗಿದೆ.

ಇದು ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ದಾಬಸ್ಪೇಟೆ/ಡಾಬಸ್ ಪೇಟೆಯಿಂದ ಸುಮಾರು ಆರು ಕಿ.ಮೀ ದೂರವಿದ್ದರೆ, ತುಮಕೂರಿನಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ. ಇದೊಂದು ಬೆಟ್ಟ ತಾಣವಾಗಿದ್ದು ಗಂಗಾಧರೇಶ್ವರ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ.

Advertisement

ತುಪ್ಪವನ್ನು ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತಿತವಾಗುತ್ತದೆ

ಬೆಟ್ಟದ ಪ್ರಾರಂಭದಲ್ಲಿಯೆ ಶಿವನಿಗೆ ಮುಡಿಪಾದ ಮುಖ್ಯವಾದ ದೇವಾಲಯವನ್ನು ನೋಡಬಹುದು. ಇದರ ವಿಶೇಷವೆಂದರೆ ಇಲ್ಲಿರುವ ಶಿವಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತಿತವಾಗುತ್ತದೆ ಎಂದು ಇಲ್ಲಿನ ಪ್ರತೀತಿ. ಅಲ್ಲದೆ ಆ ಬೆಣ್ಣೆಯಲ್ಲಿ ಔಷಧೀಯ ಗುಣಗಳಿರುತ್ತವೆ ಎಂದೂ ಸಹ ಹೇಳಲಾಗುತ್ತದೆ.

55 ಕಿ.ಮೀ ಸುರಂಗ

ಇನ್ನೂ ಕೆಲವರು ಹೇಳುವ ಪ್ರಕಾರ ಇಲ್ಲಿ ರಹಸ್ಯ ಸುರಂಗ ಮಾರ್ಗವೊಂದಿದ್ದು ಆ ಮಾರ್ಗವು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವರ ಪ್ರಕಾರ ಆ ಸುರಂಗ ಮಾರ್ಗವು ಇಲ್ಲಿಂದ 55 ಕಿ.ಮೀ ದೂರವಿರುವ ಬೆಂಗಳೂರಿನ ಪ್ರಖ್ಯಾತ ಗವಿ ಗಂಗಾಧರೇಶ್ವರನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದಂತೆ.

ಒಳಕಲ್ಲು ತೀರ್ಥ

ದೇವಾಲಯದ ಪಕ್ಕದಿಂದ ಬೆಟ್ಟವನ್ನು ಏರಬಹುದಾಗಿದ್ದು ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಒಂದು ಸ್ಥಳ ಸಿಗುತ್ತದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತದೆ. ನಂತರ ಮೊನಚಾದ ಹಾಗೂ ಕಡಿದಾದ ಬೆಟ್ಟವನ್ನು ಏರುತ್ತಾ ಸಾಗಿದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿಯ ವಿಗ್ರಹವಿರುವುದನ್ನು ಕಾಣಬಹುದು. ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ.

ಇದರ ನಂತರ ಕಾಲಿಡಲೂ ಕಷ್ಟ ಪಡಬೇಕಾದಂತಹ ಇಕ್ಕಟ್ಟಿನ ಜಾಗದಲ್ಲಿ ಹತ್ತಬೇಕಾಗುತ್ತದೆ. ಆಗ ಕಾಣುವುದೆ ಗಂಗಾಧರೇಶ್ವರನ ದೇವಾಲಯ. ಒಂದು ಕಡೆ ಚಿಕ್ಕ ಜಾಗವಿದ್ದರೆ ಇನ್ನೊಂದು ಕಡೆ ಆಳವಾದ ಪ್ರಪಾತ. ದುರ್ಬಲ ಹೃದಯವಿರುವವರಿಗೆ ಒಂದು ಕ್ಷಣ ತಲೆ ಸುತ್ತುವುದು ಖಂಡಿತ. ಅದರಲ್ಲೂ ವಿಶೇಷವಾಗಿ ಇನ್ನೊಂದು ಅತಿ ಕಡಿದಾದ ಹಾಗೂ ಮೊನಚಾದ ತುದಿಯೊಂದರ ಮೇಲೆ ಕಟ್ಟಲಾಗಿರುವ ಬೆಳ್ಳಿ ಘಂಟೆಗಳು. ಎಂಟೆದೆಯ ಭಂಟನೆ ಈ ರೀಟತಿ ಎತ್ತರದಲ್ಲಿ ಕಟ್ಟಿರಬೇಕೆಂದು ಅನಿಸುವುದು ಸಹಜ.

Advertisement

Udayavani is now on Telegram. Click here to join our channel and stay updated with the latest news.

Next