Advertisement

ಜಲ್ಲಿಕಟ್ಟು ಬಗ್ಗೆ ತ.ನಾ. ರಾಜ್ಯವೇ ಕಾನೂನು ರಚಿಸಬಹುದು

02:46 PM Jan 22, 2017 | |

ತಮಿಳುನಾಡಿನ ಜನರ ಭಾವನೆಗಳಿಗೆ ತಲೆಬಾಗಿ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ಜನಾಕ್ರೋಶಕ್ಕೆ ಮಣಿದು ನ್ಯಾಯಾಲಯದ ತೀರ್ಪುಗಳನ್ನು ಸುಗ್ರೀವಾಜ್ಞೆಯ ಮೂಲಕ ಬದಿಗೆ ಸರಿಸುವ ಕೆಟ್ಟ ಸಂಪ್ರದಾಯವನ್ನು ಇದು ಸೃಷ್ಟಿಸಬಹುದೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ಟೈಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ ಭಾರತದ ಅಟಾರ್ನಿ ಜನರಲ್‌ ಮುಕುಲ್‌ ರೋಹ್ತಾಗಿ ಸ್ಪಷ್ಟಪಡಿಸಿದ್ದಾರೆ.

Advertisement

ಜಲ್ಲಿಕಟ್ಟು ನಿಷೇಧದ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆ ನಡೆಯಿತು, ಸುಗ್ರೀವಾಜ್ಞೆಯ ಮೂಲಕ ಅನುಮತಿ ನೀಡಲಾಯಿತು. ಕೇಂದ್ರ ಸರಕಾರ ಇದಕ್ಕೆ ಶಾಶ್ವತವಾದ ಪರಿಹಾರ ಒದಗಿಸಬಹುದೇ?
     ಈ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ ಎಂಬುದನ್ನು ಮೊದಲು ತಿಳಿಯೋಣ. ಕೇಂದ್ರ ಕಾನೂನು ಪ್ರಾಣಿಗಳ ಮೇಲಿನ ಹಿಂಸೆಗೆ ಸಂಬಂಧಿಸಿದ್ದು. ಆದರೆ, ಜಲ್ಲಿಕಟ್ಟು ಒಂದು ಪ್ರಾದೇಶಿಕವಾದ, ಸಾಂಪ್ರದಾಯಿಕ ಆಟ; ತಮಿಳುನಾಡು ಮತ್ತು ಆಸುಪಾಸಿನ ಕೆಲವು ಕಡೆ ಹೊರತುಪಡಿಸಿದರೆ ಬೇರೆಡೆ ಅದನ್ನು ಆಚರಿಸುವುದಿಲ್ಲ. ಅದೊಂದು ದೇಶ ಮಟ್ಟದ ಕ್ರೀಡೆಯಲ್ಲ. ಸಂವಿಧಾನದಲ್ಲಿ ಕ್ರೀಡೆಯು ರಾಜ್ಯ ಪಟ್ಟಿಯಲ್ಲಿ ದಾಖಲಾಗಿರುವ ಪದ. ಇದರರ್ಥ ಕ್ರೀಡೆಯ ಸಹಿತ ರಾಜ್ಯ ಪಟ್ಟಿಯಲ್ಲಿ ದಾಖಲಾಗಿರುವ ವಿಚಾರಗಳಲ್ಲಿ ಕಾನೂನು ತರುವ ಅಧಿಕಾರ ರಾಜ್ಯದ್ದು. ಆ ವಿಚಾರದಲ್ಲಿ ಕೇಂದ್ರಕ್ಕೆ ಅಧಿಕಾರ ಇಲ್ಲ. ಸಂವಿಧಾನ ಇದನ್ನು ಸ್ಪಷ್ಟವಾಗಿ ವಿಭಾಗಿಸಿಕೊಟ್ಟಿದೆ. ಹೀಗಾಗಿ ತಮಿಳುನಾಡು ಸರಕಾರ ಜಲ್ಲಿಕಟ್ಟು ಕ್ರೀಡೆಯ ಬಗ್ಗೆ ಕಾನೂನು ರಚಿಸಬಹುದು. ಆದರೆ, ಹಾಗೊಂದು ಕಾನೂನು ರಚಿಸುವಾಗ ಅದರಲ್ಲಿ ಪ್ರಾಣಿಹಿಂಸೆ ಆಗುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ. ಸ್ಪೇನ್‌ನಲ್ಲಿ ನಡೆಯುವ ಗೂಳಿಕಾಳಗದಂತಹ ಕ್ರೀಡೆಗಳಲ್ಲಿ ಗೂಳಿಗ ಳನ್ನು ಕೊಲ್ಲುತ್ತಾರೆ. ಆದರೆ, ಜಲ್ಲಿಕಟ್ಟು ವಿಚಾರವಾಗಿ ನಾನು ವಾದ ಮಂಡಿಸುವ ಸಂದರ್ಭ ತಮಿಳುನಾಡಿನ ಜನರನ್ನು ಮಾತನಾಡಿಸಿದಾಗ ನನಗೆ ತಿಳಿದದ್ದೇನೆಂದರೆ, ಜಲ್ಲಿಕಟ್ಟಿನಲ್ಲಿ ಆ ಗೂಳಿಗಳನ್ನು ಜನರು ಬಹಳ ಶ್ರದ್ಧಾಭಕ್ತಿಗಳಿಂದ ಕಾಣುತ್ತಾರೆ. ಹೀಗಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಾಣಿಹಿಂಸೆ ಉಂಟಾಗದ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವ ಕಾನೂನನ್ನು ರಾಜ್ಯ ಸರಕಾರ ರಚಿಸಬಹುದು. ಸುಪ್ರೀಂಕೋರ್ಟ್‌ ಹೇಳಿರುವುದರಲ್ಲಿ ಮುಖ್ಯ ಅಂಶವಾಗಿರುವ ಪ್ರಾಣಿಹಿಂಸೆ ಉಂಟಾಗದಂತಹ ಅಂದರೆ, ಗೂಳಿಗಳಿಗೆ ಕಲ್ಲೆಸೆಯಬಾರದು, ಹತ್ಯೆ ಮಾಡ ಬಾರದು, ಹಿಂಸಿಸಬಾರದು ಮುಂತಾದ ಕಠಿನವಾದ ನಿಯಮಗಳನ್ನು ಆ ಕಾನೂನಿನಲ್ಲಿ ಸೇರಿಸಿಕೊಳ್ಳಬೇಕು. ನನ್ನ ಅಭಿಪ್ರಾಯದಲ್ಲಿ ಇದು ಸರಿಯಾದ ಕಾನೂನು ನಿಲುವು. 

ಆದರೆ, 2014ರ ಮೇ 7ರಂದು ಸು.ಕೋ. ನೀಡಿದ ತೀರ್ಪಿನಲ್ಲಿ ಉಲ್ಲೇಖೀತವಾದ, ಹಿಂಸೆಗೆ ಒಳಗಾಗಬಾರದ ಪ್ರಾಣಿಗಳ ಯಾದಿಯಲ್ಲಿ ಗೂಳಿಯ ಹೆಸರಿದೆ. ಅದರಿಂದ ಗೂಳಿಯನ್ನು ತೆಗೆದುಹಾಕಬೇಕು ಎಂದು ತಮಿಳುನಾಡಿನ ಜನ ಆಗ್ರಹಿಸುತ್ತಿದ್ದಾರಲ್ಲ? 
     ನಾನು ಹೇಳಿರುವುದು ಜಲ್ಲಿಕಟ್ಟು ಕ್ರೀಡೆಯ ನಿಷೇಧ – ಅನುಮತಿಯ ಸಂಬಂಧವಾಗಿರುವ ಕಾನೂನು ಅಂಶ ವನ್ನು. ಪ್ರಧಾನಿ ಮೋದಿಯವರು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರಿಗೆ ಏನು ಹೇಳಿ ದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ. ಪ್ರಾಣಿಹಿಂಸೆ ಉಂಟುಮಾಡದಂತೆ ಜಲ್ಲಿಕಟ್ಟು ನಡೆಸುವ ಸಂಬಂಧ ಖಂಡಿತವಾಗಿ ತಮಿಳುನಾಡು ರಾಜ್ಯ ಸರಕಾರ ಕಾನೂನು ರಚಿಸಬಹು ದಾಗಿದೆ. ಆ ಅಧಿಕಾರ ರಾಜ್ಯ ಸರಕಾರಕ್ಕಿದೆ. ರಾಜ್ಯ ಸರಕಾರ ಏನು ಮಾಡಬಹುದು ಎಂಬುದನ್ನು ನಾನು ಹೇಳಿದ್ದೇನೆ. ಪ್ರಾಣಿಹಿಂಸೆ ತಡೆಯುವ ಕಾನೂನು ಕೇಂದ್ರ ಪಟ್ಟಿಯಲ್ಲಿ ಬರುತ್ತದೆ ನಿಜ. ಸಂಸತ್ತಿನಲ್ಲಿ ಅದಕ್ಕೆ ತಿದ್ದುಪಡಿ ತಂದು ಅದರಿಂದ ಗೂಳಿಯನ್ನು ತೆಗೆದುಹಾಕಬಹುದು. ಆದರೆ ನನ್ನ ಪ್ರಶ್ನೆಯೇನೆಂದರೆ, ಸ್ಥಳೀಯ ಕ್ರೀಡೆಯೊಂದರ ವಿಚಾರವಾಗಿ ಕಾನೂನು ರಚಿಸುವುದನ್ನು ಕೇಂದ್ರ ಸರಕಾ ರದ ಮುಂದೆ ಯಾಕೆ ಒಯ್ಯಬೇಕು? ಕಾನೂನು ವಿಚಾರ ವಾಗಿ ಚರ್ಚಿಸುವಾಗ ಜಲ್ಲಿಕಟ್ಟು ಒಂದು ಪ್ರಾದೇಶಿಕ ಕ್ರೀಡೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಲ್ಲವೇ? ಪ್ರಾಣಿ ಹಿಂಸೆ ತಡೆ ಕಾನೂನು ಕೇಂದ್ರದ ವ್ಯಾಪ್ತಿಗೆ ಸೇರಿದ್ದು. ನಾನು ಹೇಳುವುದು, ಅದನ್ನು ಮತ್ತು ಸುಪ್ರೀಂಕೋರ್ಟಿನ ಅಭಿಪ್ರಾಯವನ್ನು ಗೌರವಿಸಿ, ಪ್ರಾಣಿಹಿಂಸೆಯಿಲ್ಲದ ಜಲ್ಲಿ ಕಟ್ಟು ಕ್ರೀಡೆಗೆ ಅನುಮತಿ ನೀಡುವ ಬಗ್ಗೆ ರಾಜ್ಯ ಸರಕಾ ರವೇ ಕಾನೂನು ರಚಿಸಲಿ ಎಂದು. ಎಲ್ಲೋ ಒಂದೆರಡು ಕಡೆ ಪ್ರಾಣಿಹಿಂಸೆಯಾಯಿತು ಎಂದರೆ ಇಡೀ ಕ್ರೀಡೆಯನ್ನೇ ಯಾಕೆ ನಿಷೇಧಿಸಬೇಕು ಅನ್ನುವುದು ನನ್ನ ಪ್ರಶ್ನೆ. 

ಕಳೆದ ವರ್ಷ ಕೇಂದ್ರ ಸರಕಾರ ಜಲ್ಲಿಕಟ್ಟು ಅನುಮತಿ ಆದೇಶ ಹೊರಡಿಸಿದಾಗ ನ್ಯಾಯಾಲಯದಲ್ಲಿ ಅದರ ಪರ ವಾದಿಸಿದ್ದಿರಿ. ಈಗ ಜಲ್ಲಿಕಟ್ಟು ಪರ ಅಥವಾ ವಿರೋಧವಾಗಿ ನಿಲ್ಲದೆ ಕೈತೊಳೆದುಕೊಳ್ಳಿ ಎಂಬ ಸಲಹೆಯನ್ನು ನೀವು ಕೇಂದ್ರ ಸರಕಾರಕ್ಕೆ ನೀಡುತ್ತಿದ್ದೀರಾ? 
     ಈ ವಿಚಾರದಲ್ಲಿ ಹಿಂದೆ ಅಥವಾ ಈಗ ಇರುವ, ಇರಬಹುದಾದ ರಾಜಕೀಯ ಒಳಸುಳಿಗಳ ವಿಚಾರ ನನಗೆ ಗೊತ್ತಿಲ್ಲ. ಕೇಂದ್ರ ಸರಕಾರ ಜಲ್ಲಿಕಟ್ಟು ವಿಚಾರದಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು, ಅದರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವುದು ಅಟಾರ್ನಿ ಜನರಲ್‌ ಆಗಿ ನನ್ನ ಕರ್ತವ್ಯ. ಅಧಿಸೂಚನೆಯನ್ನು ಯಾಕೆ ಹೊರಡಿಸಲಾಯಿತು ಎಂಬುದು ನನಗೆ ಸಂಬಂಧಿಸಿದ್ದಲ್ಲ. ಪ್ರಾಣಿಹಿಂಸೆ ವಿರುದ್ಧ ಹೋರಾಡುವ ಹೋರಾಟಗಾರರ ಕಾಳಜಿಯನ್ನು ಇರಿಸಿಕೊಂಡು ಆ ಅಧಿಸೂಚನೆಯನ್ನು ಸರಕಾರ ಹೊರಡಿಸಿತ್ತು, ಆ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ, ತೀರ್ಪನ್ನು ಕಾಯ್ದಿರಿಸಲಾಗಿದೆ. ಇದು ಒಂದು ವಿಚಾರ. ಎರಡನೆಯದಾಗಿ, ಯಾವುದೇ ವಿಷಯದ ಬಗ್ಗೆ ಹೀಗೆ ಮಾಡಿ, ಹಾಗೆ ಮಾಡಬೇಡಿ ಎಂದು ಸರಕಾರಕ್ಕೆ ಸಲಹೆ ನೀಡುವುದು ನನ್ನ ಕೆಲಸವಲ್ಲ. ಕೇಂದ್ರ ಸರಕಾರ ಅಥವಾ ಯಾವುದೇ ಸಚಿವಾಲಯ ಈ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿಲ್ಲ. ನಾನು ಹೇಳುತ್ತಿರುವುದು ಕಾನೂನಾತ್ಮಕವಾಗಿ ಜಲ್ಲಿಕಟ್ಟು ವಿಚಾರದಲ್ಲಿ ಏನು ಮಾಡಬ ಹುದು, ಯಾವುದು ಸರಿಯಾದ ನಿಲುವು ಅನ್ನುವುದನ್ನು. 

ತಮಿಳುನಾಡಿನ ಜನರ ಭಾವನೆಗಳಿಗೆ ತಲೆಬಾಗಿ ಜಲ್ಲಿಕಟ್ಟುವಿಗೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಕೇಂದ್ರ ಹೊರಡಿಸಿದೆ. ಸುಪ್ರೀಂಕೋರ್ಟ್‌ ತೀರ್ಪುಗಳನ್ನೆಲ್ಲ ಹೀಗೆಯೇ ಭಾವನಾತ್ಮಕ ಹೋರಾಟಗಳ ಮೂಲಕ ಪ್ರಶ್ನಿಸಬಹುದು ಎನ್ನುವ ದುರದೃಷ್ಟಕರ ಉದಾಹರಣೆಯನ್ನು ಇದು ಸೃಷ್ಟಿಸಬಹುದಲ್ಲವೇ? 
     ಭಾವನಾತ್ಮಕ ಹೋರಾಟಗಳು ಬೇರೆ, ಕಾನೂನು ಬೇರೆ. ನೆಲದ ಕಾನೂನನ್ನು ಗೌರವಿಸಿಯೇ ಮುಂದುವರಿಯಬೇಕು. ಕೆಲವೊಮ್ಮೆ ಕೆಲವು ವಿಚಾರಗಳು ಭಾವನಾತ್ಮಕವಾಗಿ ಪ್ರತಿಭಟನೆ, ಹೋರಾಟಗಳನ್ನು ಪ್ರಚೋದಿಸುತ್ತವೆ ನಿಜ. ಆದರೆ, ಅಂತಿಮವಾಗಿ ನೆಲದ ಕಾನೂನನ್ನು ಗೌರವಿಸಬೇಕು, ಪಾಲಿಸಬೇಕು. ಯಾವುದೇ ರಾಜ್ಯ, ನಗರ, ಗುಂಪು ಅಥವಾ ಪ್ರಾಂತ್ಯ ನ್ಯಾಯಾಲಯದ ತೀರ್ಪನ್ನು ಹೈಜಾಕ್‌ ಮಾಡಬಾರದು ಅನ್ನುವುದು ಮುಖ್ಯ. ನಾನು ಈಗಾಗಲೇ ಹೇಳಿದಂತೆ ಜಲ್ಲಿಕಟ್ಟು ಸಹಿತ ಅಂತಹ ಭಾವನಾತ್ಮಕ ವಿಚಾರಗಳು ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಗೆ ಸೇರಿದ್ದು ಮತ್ತು ರಾಜ್ಯವೇ ಅದನ್ನು ನಿಭಾಯಿಸಬೇಕು. 

Advertisement

ಅಂದರೆ, ಜಲ್ಲಿಕಟ್ಟು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿದ್ದರೂ ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆದು ಕಾನೂನು ರಚಿಸಬಹುದು?
     ಹೌದು. ಆ ವಿಚಾರದಲ್ಲಿ ಅನುಮಾನವೇ ಇಲ್ಲ. ವಿಶೇಷ ಅಧಿವೇಶನ ಕರೆದು ಜಲ್ಲಿಕಟ್ಟು ನಡೆಸುವ ಬಗೆಗೆ ರಾಜ್ಯ ಸರಕಾರ ಕಾನೂನನ್ನು ರಚಿಸಬಹುದಾಗಿದೆ. ಆದರೆ, ಕೇಂದ್ರ ಪಟ್ಟಿಯಲ್ಲಿ ಇರುವ ಪ್ರಾಣಿಹಿಂಸೆ ತಡೆ ಅಂಶವನ್ನು ಗೌರವಿಸಿ, ಅಲ್ಲಿರುವ ನಿಯಮಗಳನ್ನು ಒಳಗೊಂಡ ಕಾನೂನನ್ನು ರಚಿಸಬೇಕು. ಈ ಬಗ್ಗೆ ವಿಶೇಷ ಅಧಿವೇಶನ ಕರೆಯಬೇಕೇ ಅಥವಾ ಅಧ್ಯಾದೇಶ ಹೊರಡಿಸಬೇಕೇ ಅನ್ನುವುದು ಅವರಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಅಥವಾ ಸಂವಿಧಾನಾತ್ಮಕವಾಗಿ ಯಾವುದೇ ಅಡೆತಡೆಗಳಿಲ್ಲ. ಯಾಕೆಂದರೆ, ವಿಶೇಷ ಅಧಿವೇಶನ ಕರೆದು ಕಾನೂನು ರೂಪಿಸುವುದು ಅಥವಾ ಅಧ್ಯಾದೇಶ ಹೊರಡಿಸುವ ಅಧಿಕಾರ ಇಡೀ ದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳಲ್ಲಿ ಸಮಾನವಾಗಿ ಇದೆ. 

ಜಲ್ಲಿಕಟ್ಟು ಅನುಮತಿ ಸಂಬಂಧ ತಮಿಳುನಾಡು ರಾಜ್ಯ ಸರಕಾರವೇ ಕಾನೂನು ರಚಿಸಬೇಕು ಅನ್ನುವುದು ನಿಮ್ಮ ಅಭಿಪ್ರಾಯ
     ನಾನು ಆಗಲೇ ಹೇಳಿದಂತೆ, ಕ್ರೀಡೆ ರಾಜ್ಯ ಪಟ್ಟಿಯಲ್ಲಿರು ವುದರಿಂದ ರಾಜ್ಯ ಸರಕಾರ ಆ ಬಗ್ಗೆ ಕಾನೂನು ರಚಿಸ ಬಹುದಾಗಿದೆ. ಪ್ರಾಣಿಹಿಂಸೆ ಆಗುತ್ತಿಲ್ಲ ಎಂಬುದನ್ನು ಖಾತರಿಪಡಿ ಸಿಕೊಳ್ಳಬೇಕು ಅಷ್ಟೇ. ಯಾಕೆಂದರೆ ಪ್ರಾಣಿ ಹಿಂಸೆ ತಡೆ ಕೇಂದ್ರ ಪಟ್ಟಿಯಲ್ಲಿ ಬರುತ್ತದೆ. ಇನ್ನೊಂದು ವಿಚಾರ ಅಂದರೆ, ಪ್ರಾಣಿಹಿಂಸೆ ತಡೆ ಕಾನೂನು ಅಥವಾ ಕೇಂದ್ರ ಪಟ್ಟಿಯಲ್ಲಿ ಬರುವ ಯಾವುದೇ ವಿಚಾರಗಳ ಬಗೆಗಿನ ಕಾನೂನಿಗೆ ಸುಗ್ರೀವಾಜ್ಞೆಯ ಮುಖಾಂತರ ಅಥವಾ ಸಂಸತ್ತಿನಲ್ಲಿ ನಿರ್ಣಯದ ಮೂಲಕ ತಿದ್ದುಪಡಿ ತರುವ ಅಧಿಕಾರ ಕೇಂದ್ರಕ್ಕೆ ದತ್ತವಾಗಿದೆ. ಇದು ಬಹಳ ಸರಳವಾದ ವಿಚಾರ.

– ಮುಕುಲ್‌ ರೋಹ್ತಾಗಿ
ಭಾರತದ ಅಟಾರ್ನಿ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next