Advertisement

ಜಿಎಸ್‌ಟಿ ಬಗ್ಗೆ ಜಾಗೃತಿ ಕಾರ್ಯಾಗಾರ ಮುಂದುವರಿಕೆ: ರಿತ್ವಿಕ್‌ ಪಾಂಡೆ

03:45 AM Jul 04, 2017 | Team Udayavani |

ಬೆಂಗಳೂರು: ಜಿಎಸ್‌ಟಿಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕೆಲವೆಡೆ ಸಣ್ಣಪುಟ್ಟ ಗೊಂದಲ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ದೂರು ಕೇಳಿಬಂದಿಲ್ಲ. ಸದ್ಯ ಜಿಎಸ್‌ಟಿ ಬಗ್ಗೆ ಗೊಂದಲ ನಿವಾರಣೆಗೆ ಒತ್ತು ನೀಡಲಾಗುತ್ತಿದ್ದು, ಜುಲೈ 15ರ ಬಳಿಕ ಲೆಕ್ಕಪತ್ರ ಸಲ್ಲಿಕೆ (ರಿಟರ್ನ್) ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಆಯುಕ್ತ ರಿತ್ವಿಕ್‌ ಪಾಂಡೆ ತಿಳಿಸಿದರು.

Advertisement

ಜಿಎಸ್‌ಟಿ ಜಾರಿಯಾಗಿ ಮೂರು ದಿನ ಕಳೆದಿರುವ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, “ಜಿಎಸ್‌ಟಿ ಜಾರಿಗೆ ಮುನ್ನ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಕಾರ್ಯಾಗಾರ, ವಿಚಾರಸಂಕಿರಣಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು. ಜಿಎಸ್‌ಟಿ ಜಾರಿ ಬಳಿಕವೂ ಗ್ರಾಹಕರು, ವ್ಯಾಪಾರಿಗಳಲ್ಲಿ ಮೂಡಿರುವ ಗೊಂದಲ ನಿವಾರಿಸಲು, ಸ್ಪಷ್ಟತೆ ಮೂಡಿಸಲು ಜುಲೈ 15ರವರೆಗೆ ಇಲಾಖೆ ಅಧಿಕಾರಿಗಳು ಸ್ಪಂದಿಸಲಿದ್ದಾರೆ. ರಾಜ್ಯಾದ್ಯಂತ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗಳಿದ್ದು, ಅವುಗಳನ್ನು ಸಂಪರ್ಕಿಸಿ ಗ್ರಾಹಕರು, ವಹಿವಾಟುದಾರರು ತಮ್ಮ ಗೊಂದಲ ನಿವಾರಿಸಿಕೊಳ್ಳಬಹುದು’ ಎಂದು ಹೇಳಿದರು.

“ಈವರೆಗೆ ಶೇ.96ರಷ್ಟು ವಹಿವಾಟುದಾರರು ಹಳೆಯ ತೆರಿಗೆ ಪದ್ಧತಿಯಿಂದ ಜಿಎಸ್‌ಟಿಗೆ ವರ್ಗಾವಣೆಯಾಗಿದ್ದಾರೆ. ಸುಮಾರು 6.50 ಲಕ್ಷ ವ್ಯಾಪಾರಿಗಳು ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡಿರುವ ಅಂದಾಜುಯಿದ್ದು, ಇದರಲ್ಲಿ 5.5 ಲಕ್ಷ ಮಂದಿ ವ್ಯಾಟ್‌ನಿಂದ ಜಿಎಸ್‌ಟಿಗೆ ವರ್ಗಾವಣೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ವಹಿವಾಟು ನಡೆಸುವವರು ಆಗಸ್ಟ್‌ 20ಕ್ಕೆ ಮೊದಲ ಲೆಕ್ಕಪತ್ರಗಳನ್ನು (ರಿಟರ್ನ್) ಸಲ್ಲಿಸಬೇಕಾಗುತ್ತದೆ. ಹಾಗಾಗಿ ಜುಲೈ 15ರ ಬಳಿಕ ರಿಟರ್ನ್ ಸಲ್ಲಿಕೆ ಬಗ್ಗೆ ಅರಿವು ಮೂಡಿಸಲು ಆದ್ಯತೆ ನೀಡಲಾಗುವುದು. ಇದರಿಂದ ಜಿಎಸ್‌ಟಿಯ ಸಂಪೂರ್ಣ ಪ್ರಕ್ರಿಯೆ ಬಗ್ಗೆ ಮಾಹಿತಿ ಒದಗಿಸಿದಂತಾಗಲಿದೆ ಎಂದು ಹೇಳಿದರು.

ಚೆಕ್‌ಪೋಸ್ಟ್‌ಗಳಲ್ಲಿ ನಿಯಮಿತ ತಪಾಸಣೆ ಮುಂದುವರಿಕೆ
ಜಿಎಸ್‌ಟಿ ಜಾರಿ ಬಳಿಕ ರಾಜ್ಯದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಕಡ್ಡಾಯ ತಪಾಸಣೆ ರದ್ದಾಗಿದೆ. ಆದರೆ ಆಗಾಗ್ಗೆ ನಿಯಮಿತ ತಪಾಸಣೆ (ರ್‍ಯಾಂಡಮ್‌ ಚೆಕ್‌) ಮುಂದುವರಿಯಲಿದೆ. ಒತ್ತಡ ಹೆಚ್ಚು ಇರುವ ಅವಧಿ, ಆಯ್ದ ದಿನ, ಸಂದರ್ಭಗಳಲ್ಲಿ ರ್‍ಯಾಂಡಮ್‌ ಚೆಕ್‌ ಮುಂದುವರಿಯಲಿದೆ. ಸದ್ಯ ಅಗತ್ಯ ಪ್ರಮಾಣದಲ್ಲಿ ಇಲಾಖೆಯ ಸಂಚಾರಿ ದಳಗಳಿದ್ದು, ಹೆಚ್ಚು ಮಾಡುವ ಅಗತ್ಯವಿಲ್ಲ ಎಂದುತ ತಿಳಿಸಿದರು.

Advertisement

200 ಮಂದಿ ಕಚೇರಿ- ಆಡಿಟ್‌ಗೆ ಬಳಕೆ
ಚೆಕ್‌ಪೋಸ್ಟ್‌ಗಳು ರದ್ದಾಗಿರುವುದರಿಂದ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 200ಕ್ಕೂ ಹೆಚ್ಚು ಅಧಿಕಾರಿ, ನೌಕರ, ಸಿಬ್ಬಂದಿಯನ್ನು ಇತರೆ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಸದ್ಯ ರಾಜ್ಯಾದ್ಯಂತ ಇಲಾಖಾ ಕಚೇರಿಗಳಲ್ಲಿ ನೋಂದಣಿ, ತಿದ್ದುಪಡಿ ಸೇರಿದಂತೆ ಜಿಎಸ್‌ಟಿ ವ್ಯವಹಾರದಡಿ ಕಾರ್ಯ ನಿರ್ವಹಣೆಗೆ ಒತ್ತಡ ಹೆಚ್ಚಿದ್ದು, ಆಡಳಿತ ವಿಭಾಗದ ಅಧಿಕಾರಿಗಳಲ್ಲಿ ಕೆಲವರನ್ನು ಈ ಕಚೇರಿಗಳಿಗೆ ನಿಯೋಜಿಸಲಾಗುವುದು. ಉಳಿದವರನ್ನು ಇಲಾಖೆಯ ಲೆಕ್ಕಪರಿಶೋಧನಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next