ತಮ್ಮ ಪೂರ್ವಜರ ಕುಟುಂಬ-ಕುಲ- ಕಸುಬು-ದೈವಗಳು-ಪರಂಪರೆ- ನಂಬುಗೆಗಳು- ಆಚರಣೆಗಳ ವಿವರಗಳು, ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನೊಳಗಣ ಮನುಷ್ಯಲೋಕದ ಜೊತೆಗೆ ಲೇಖಕಿ ತಮ್ಮ ಸುಂದರ ಬಾಲ್ಯವನ್ನು ಬೆಸೆದಿ¨ªಾರೆ. ಓದು, ಬರಹದ ಕನಸುಗಳು, ಎದುರಿಸಿ ಗೆದ್ದ ವೃತ್ತಿಜೀವನದ ಸವಾಲುಗಳು, ಸಂಸಾರ, ಮಕ್ಕಳು- ಮೊಮ್ಮಕ್ಕಳ ಲಾಲನೆ-ಪಾಲನೆಯ ಅಕ್ಕರೆಯ ಲೋಕ ದಾಟುತ್ತಾರೆ. ಕೊನೆಗೆ ಜನಪದ ಕಾವ್ಯವೊಂದರ ಕಟ್ಟಕಡೆಯ ಸೊಲ್ಲು ಎಂಬಂತೆ ಅಜ್ಜಿಯ ನೆನಹಿನಲ್ಲಿ ಕಥನಕ್ಕೆ ಕೊನೆಹಾಡಿ ನಿರಾಳವಾಗುತ್ತಾರೆ.
Advertisement
ಮುತ್ತಾತ-ಪ್ರೇಯಸಿಯೊಡನೆ ಬಂದಿದ್ದು ಅವರ ಸಂತತಿ ಹೆಚ್ಚೆಚ್ಚಾಗಿ ಜನಸಂಖ್ಯೆ ವೃದ್ಧಿಯಾಗಿ ಅದೇ ಒಂದು ಊರು ಅನ್ನುವಂತೆ ಬೆಳೆಯಿತು ಎಂಬ ಪೂರ್ವಜರ ವೃತ್ತಾಂತವನ್ನು ರೋಚಕವಾಗಿ ಬಣ್ಣಿಸುವ ಲೇಖಕಿ, ಆ ಕಾಲಘಟ್ಟದ ಚಿತ್ರಣವನ್ನು ಕಣ್ಮುಂದೆ ಕೆತ್ತಿ ನಿಲ್ಲಿಸುತ್ತಾರೆ. ಅಮ್ಮ, ಅಜ್ಜಿ ರಾಚಮ್ಮ, ಸಿದ್ದತ್ತೆ, ಅತ್ತೆ ನಂಜಮ್ಮ ಹೀಗೊಂದು ಸಬಲ ಹೆಣ್ಣು ಲೋಕವುಂಟಲ್ಲಿ. ಅಜ್ಜಿ ರಾಚಮ್ಮನೆಂದರೆ ಬಲು ಅಚ್ಚುಮೆಚ್ಚು. ಒಂದು ರೀತಿಯಲ್ಲಿ ಅಜ್ಜಿಯೇ ಲೇಖಕಿಗೆ ಅಂತಃಸ್ಫೂರ್ತಿ. ಹಣ್ಣಾದ ಜೀವದ ಅಕ್ಕರೆ, ಆಟಪಾಠ, ಶಿಸ್ತುಬದ್ಧ ಬದುಕಿನ ಕ್ರಮ, ಆಗಿನ ಕಾಲದಲ್ಲಿಯೇ ಆಕೆ ಎರಡನೆಯ ತರಗತಿವರೆಗೆ ಓದಿದ್ದು, ತಮ್ಮ ವಂಶಜರಲ್ಲಿ ಕೆಲವರು ಕ್ರೈಸ್ತರಾಗಿ ಮತಾಂತರ ಹೊಂದಿದ್ದು, ದೊಡ್ಡ ಕುಟುಂಬದಲ್ಲಿ ಹಲವು ಪ್ರತಿಭಾವಂತರಿದ್ದದ್ದನ್ನು ಗುರುತಿಸುವ ಲೇಖಕಿ ಆ ಕಾಲದಲ್ಲಿಯೇ ಶಾಲೆ ತೆರೆದು ದಲಿತರಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಓದುಬರೆಹ ಕಲಿಸಿದ ಕ್ರಿಶ್ಚಿಯನ್ ಮಿಷನರಿಯವರನ್ನು ಬೆಳಗಾಗಿ ಎದ್ದು ಮೊದಲು ನೆನೆಯಬೇಕು ಎನ್ನುತ್ತಾರೆ. ಈ ಸಾಲುಗಳು- ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಂಡ ಮಿಷನರಿಗಳ ಹೊಸ ಅಲೆ, ಬದಲಾಗುತ್ತಿರುವ ಕಾಲಘಟ್ಟದ ಮುಂದುವರಿದ ಭಾಗವಾಗಿ ಕಣ್ಣಿಗೆ ಕಟ್ಟುತ್ತವೆ.
Related Articles
Advertisement
ದೇಮಾ ಮತ್ತು ಮಿತ್ರಿಮುಂದೆ ದೇವನೂರು ಮಹಾದೇವರು ಅವರ ಬಾಳಸಂಗಾತಿಯಾಗಿ ಸುಮಿತ್ರಾಬಾಯಿ ಅವರ “ದೇಮಾ’ನಾಗಿ, ಆಕೆ ಅವರ “ಮಿತ್ರಿ’ಯಾಗಿ ಅರಳುವ ಬಾಳಕಥನ ಒಂದು ಸುಂದರ ಅನ್ಯೋನ್ಯ ದಾಂಪತ್ಯ ಕಾಲ ಉರುಳಿದಂತೆ ಪರಿಪಕ್ವಗೊಂಡ ಬಗೆಯನ್ನು ಚಿತ್ರಿಸುತ್ತದೆ. “ದೇಮಾ’ ಕುಸುಮಬಾಲೆಯನ್ನು ಬರೆಯುವಾಗಿನ ಸ್ಥಿತಿ, ಎಲ್ಲರ ನೋವನ್ನೂ ತಾವೇ ಅನುಭವಿಸಿದಂತೆ ಕೊರಗುವ ಮಾದೇವರ ಸರಳತೆ, ಮುಗ್ಧತೆಗಳು ನಮ್ಮನ್ನು ಮೂಕರನ್ನಾಗಿಸುತ್ತವೆ. ಮಾದೇವರ ಸೈಕಲ್ಲಾಯಣ, ಸೈಕಲ್ ಕಳೆದುಕೊಂಡು ಬರುತ್ತಿದ್ದ ವಿವರಣೆ- ಓದುತ್ತ ಓದುತ್ತ ಮಹಾದೇವರ ಸಜ್ಜನಿಕೆ, ಮುಗ್ಧತೆಯ ಹಲವು ರೂಪಗಳು, ರೂಪಕಗಳು ಅವರ ವ್ಯಕ್ತಿತ್ವದ ಒಳಪದರಗಳನ್ನು ತೆರೆದಿಡುತ್ತವೆ. ದಲಿತ ಸಂಘರ್ಷ ಸಮಿತಿಗಾಗಿ ಹಗಲೆನ್ನದೇ ಇರುಳೆನ್ನದೇ ದುಡಿಯುತ್ತಿದ್ದ ದೇವನೂರರನ್ನು ಕೆಲವರು ಹಗುರವಾಗಿ ಆಡಿಕೊಂಡಾಗಲೂ, ಸಂಚುಗಳನ್ನು ರೂಪಿಸಿ ದಾಗಲೂ, ಆರೋಪಗಳ ಗೂಬೆಯನ್ನು ತಲೆಮೇಲೆ ಕೂರಿಸಿದಾಗಲೂ ಸ್ಥಿತಪ್ರಜ್ಞನಂತೆ ಮೌನವಾಗುಳಿದ ಮಾದೇವರ “ದೇವರಂಥ ಗುಣ’ಕ್ಕೆ “ಮಿತ್ರಿ’ಯ ಮನಸು ತಲೆಬಾಗುತ್ತದೆ. ಆದರೂ ಅವರೇ ಹೇಳುವಂತೆ- ದೇವನೂರರನ್ನು ಮಗುವಿನಂತೆ ಸಂಭಾಳಿಸದೇ ಹೋಗಿದ್ದರೆ ಏನಾಗುತ್ತಿತ್ತೋ? ಎನಿಸದೇ ಇರದು. ಇವೆಲ್ಲದರ ನಡುವೆ ಮಿಂಚುವ ಹಾಸ್ಯಪ್ರಸಂಗಗಳು, ಎಡವಟ್ಟುಗಳು, ಮೋಜಿನ ಘಟನೆಗಳು ಓದುಗರ ತುಟಿಗಳಿಗೆ ಮಂದಹಾಸ ಮೂಡಿಸುತ್ತವೆ. 1973ರಲ್ಲಿ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ನವರ “ಬೂಸಾ’ ಹೇಳಿಕೆಯು ಉಂಟುಮಾಡಿದ ಅಲ್ಲೋಲಕಲ್ಲೋಲ, ದಲಿತರ ಅಸ್ತಿತ್ವಕ್ಕೆ ಬಿದ್ದ ಪೆಟ್ಟು ದಲಿತ ಸಂಘರ್ಷದ ಹುಟ್ಟಿಗೆ ಕಾರಣವಾಗಿದ್ದು, ಶೋಷಿತ ಪತ್ರಿಕೆಯ ಉದಯ, ಮುಂದೆ ಅದು ಪಂಚಮದ ಹೆಸರಿನಲ್ಲಿ ಮುಂದುವರಿದದ್ದು, ದೇಮಾನೇ ಆ ಪತ್ರಿಕೆಯ ವರದಿಗಾರ ಮತ್ತು ಕಾಲಮಿಸ್ಟ್ ಆಗಿ ನಡೆಸಿಕೊಂಡು ಬಂದದ್ದನ್ನು ಲೇಖಕಿ ತಾಳ್ಮೆಯಿಂದ ದಾಖಲಿಸಿದ್ದಾರೆ. ಅಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನದ ಸವಾಲುಗಳು, ಸಾರ್ಥಕ ಕ್ಷಣಗಳು ಸಂತೃಪ್ತಿ ಕೊಟ್ಟ ಬದುಕಿನ, ರೋಚಕ ಘಟನೆಗಳನ್ನು ನವಿರು ಹಾಸ್ಯದಲ್ಲಿ ವಿವರಿಸುವ ಸುಮಿತ್ರಾ ಅವರ ಕುಸುರಿಗಾರಿಕೆ ಬೆರಗು ಹುಟ್ಟಿಸುವಂಥಾದ್ದು. ವೈಯಕ್ತಿಕ ಬದುಕಿನ ಏಳುಬೀಳುಗಳಲ್ಲಿಯೂ ತಮ್ಮ ದಿಟ್ಟತನ, ಆತ್ಮಸ್ಥೈರ್ಯ, ಛಲದಿಂದ ಮೇಲೇರಿ ಹೆಸರು ಮಾಡಿದ ಹಾಗೂ ಪ್ರಖ್ಯಾತರ ಪತ್ನಿಯರಾಗಿ ಗುರುತಿಸಿಕೊಂಡ ಹೆಸರುಳ್ಳ ಮಹಿಳೆಯರ ಆತ್ಮಕಥನಗಳು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಂಚಲನ ಉಂಟುಮಾಡಿವೆ. ಕೊರಗಿನಲ್ಲಿಯೇ ಬದುಕನ್ನು ಬರಿದು ಮಾಡಿಕೊಳ್ಳದೆ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿ, ಗೃಹಸ್ಥ ಜೀವನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಲೇ ಒಡಮೂಡಿದ ಈ ಕಥನಗಳು ಇತರ ಮಹಿಳೆಯರಿಗೂ ಆತ್ಮಸ್ಥೈರ್ಯ ತುಂಬುತ್ತವೆ. ಇಂದಿರಾ ಲಂಕೇಶರ ಹುಳಿಮಾವಿನ ಮರ ಮತ್ತು ನಾನು, ವಿಜಯಮ್ಮ ಅವರ ಕುದಿ ಎಸರು ಹೆಣ್ಣುಲೋಕದ ಕಷ್ಟಕಾರ್ಪಣ್ಯಗಳ ಬೆಂಕಿಯಲ್ಲಿ ಬೆಂದು ಅಪರಂಜಿಯಾದವರ ಕತೆಯಾದರೆ, ರಾಜೇಶ್ವರಿ ಅವರು ಬರೆದ ನನ್ನ ತೇಜಸ್ವಿ ಒಂದು ನೆಮ್ಮದಿಯ ದಾಂಪತ್ಯದ ರಸನಿಮಿಷಗಳ ಪಾತಳಿ ಯಲ್ಲಿ ಅನಾವರಣಗೊಳ್ಳುವ ಸಾಂಗತ್ಯದ ಕಥನವಾಗಿ ಗೆಲ್ಲುತ್ತದೆ. ಅಲ್ಲಿ ತೇಜಸ್ವಿ ಅವರ ಪ್ರಖರವಾದ ಬೆಳಕಿನ ಜಾಡಿನಲ್ಲಿ ಅವರ ನೆರಳು ಮಾತ್ರವಾಗಿ ರಾಜೇಶ್ವರಿ ಕಾಣುತ್ತಾರೆ. ತೇಜಸ್ವಿ ಇಲ್ಲದೇ ಆಕೆಗೆ ಪೂರ್ಣ ವ್ಯಕ್ತಿತ್ವವೆಂಬುದೇ ಇಲ್ಲವೇನೋ ಎನ್ನುವಷ್ಟು. ರಾಜೇಶ್ವರಿ ಅವರನ್ನು ಸಾಹಿತಿಯೊಬ್ಬರು, “ನೀವೇಕೆ ಬರೆಯಬಾರದು?’ ಎಂದು ಕೇಳಿದಾಗ- “ಆಕೆ ಮನೆ ಸಾಮಾನಿನ ಯಾದಿ ಮಾಡಲಿಕ್ಕೆ ಮಾತ್ರ ಲಾಯಕ್ಕು, ಏನು ಬರೀಬಲ್ಲಳು’ ಎಂಬಂತೆ ತೇಜಸ್ವಿ ತಮಾಷೆ ಮಾಡಿದ್ದರಂತೆ. ಎಂದೂ ಏನನ್ನೂ ಬರೆಯದ ರಾಜೇಶ್ವರಿ ತಮ್ಮ ಅನುಭವಗಳನ್ನು 500 ಪುಟಗಳುದ್ದಕ್ಕೆ ಹರವಿದ್ದು ಸಣ್ಣ ಸಾಧನೆಯಲ್ಲ. ದೇವನೂರ ಮಹಾದೇವರ ಬಾಳ ಸಂಗಾತಿ ಯಾಗಿ, ಮೈಸೂರಿನ ಮಹಾರಾಜಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆಯಾಗಿ ದಕ್ಷ ಆಡಳಿತಗಾರ್ತಿ, ಮನೆಮಕ್ಕಳು ಅನ್ನುವ ಮನೆವಾಳೆ¤ಯನ್ನು ಸಮರ್ಥ ವಾಗಿ ನಿಭಾಯಿಸಿದ ಕೆ. ಸುಮಿತ್ರಾಬಾಯಿ ಬಾಳಕಥನ ಕನ್ನಡ ಸಾಹಿತ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆ. ದೇವನೂರರ ನೆರಳಿಗೆ ಸರಿಯದೆ ತುಸು ದೂರ ಕಾಪಾಡಿಕೊಂಡು ತಮ್ಮದೇ ಅಸ್ಮಿತೆಯ ಬೆಳಕಿನಲ್ಲಿ ತಾವು ಕಂಡುಂಡ ಬದುಕನ್ನು, ಸುತ್ತಮುತ್ತಲ ಸಮಾಜವನ್ನೂ, ತಮ್ಮ ಬಾಳಸಂಗಾತಿ ದೇಮಾರನ್ನೂ ಆಪ್ತವಾಗಿ ಸಾಂದ್ರವಾಗಿ ಕಟ್ಟಿಕೊಟ್ಟ ಸುಮಿತ್ರಾ ಅವರನ್ನು ನಚ್ಚಗೆ ನೆನೆಯಬೇಕೆನಿಸುತ್ತದೆ. ತಾವು ಬರೆದ ಕಥನವನ್ನು ಆತ್ಮಕಥನವೆನ್ನದೇ ಬಾಳಕಥನವೆನ್ನುವುದರಲ್ಲೂ ಸುಮಿತ್ರಾ ವೈಶಿಷ್ಟ್ಯವಿದೆ. ಜೇಮ್ಸ… ಓಲಿ° ಎಂಬ ಚಿಂತಕನ ಪ್ರಕಾರ ಆತ್ಮಕಥನವೆನ್ನುವುದು ಚರಿತ್ರೆಯೂ ಅಲ್ಲ, ಕಥೆಯೂ ಅಲ್ಲ, ಅದು ವ್ಯಕ್ತಿಯೊಬ್ಬನ ಅನನ್ಯತೆಯ ಒಂದು ರೂಪಕ. ಸುಮಿತ್ರಾಬಾಯಿ ಅವರ ಬಾಳಕಥನ, ಚರಿತ್ರೆಯಾಗಿರಬಹುದಾದ ಕಾಲಗಮ್ಯವನ್ನು ಸವರುತ್ತಲೇ ಕಥನವಾಗಿ ಅರಳಿದ ಒಂದು ಶಿಲ್ಪರೂಪಕವಾಗಿದೆ. ರೇಣುಕಾ ನಿಡಗುಂದಿ