Advertisement

ಪ್ರತಿದಿನ ಗೊಬ್ಬರವಾಗುತ್ತಿದೆ 8 ಸಾವಿರ ಮನೆಗಳ ಹಸಿಕಸ

09:12 PM Nov 24, 2020 | mahesh |

ಮಹಾನಗರ: ನಗರದಲ್ಲಿ ತ್ಯಾಜ್ಯ ನಿರ್ವಹಣೆಯು ಅತಿದೊಡ್ಡ ಸಮಸ್ಯೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿ ಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಹಸಿಕಸದಿಂದ ಗೊಬ್ಬರ ತಯಾರಿಸುವ ಯೋಜನೆಯೊಂದು ಇದೀಗ ಯಶಸ್ಸು ಕಾಣತೊಡಗಿದೆ.

Advertisement

ಪರಿಸರ ಪ್ರೇಮಿ ಜೀತ್‌ ಮಿಲನ್‌ ಅವರ ಮುಂದಾಳತ್ವದೊಂದಿಗೆ ಒಂದು ವರ್ಷದಿಂದ ಮಂಗಳೂರಿನ ವಸತಿ ಸಮುಚ್ಚಯಗಳಲ್ಲಿ ಸ್ವಯಂಚಾಲಿತ ಮತ್ತು ವಿದ್ಯುತ್‌ ಚಾಲಿತ ಕಸ ಸಂಸ್ಕರಣ ಬಿನ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ 42 ಫ್ಲ್ಯಾಟ್‌ಗಳಲ್ಲಿ ಇದನ್ನು ಅಳವಡಿಸಲಾಗಿದ್ದು, 8 ಸಾವಿರ ಮನೆಗಳ ಅಡುಗೆ ಮನೆ ಹಸಿಕಸ ಗೊಬ್ಬರವಾಗಿ ಗಿಡ ಮರಗಳಿಗೆ ಆಹಾರವಾಗುತ್ತಿದೆ.

ಸುಮಾರು ಆರು ಫ್ಲ್ಯಾಟ್‌ಗಳಲ್ಲಿ ಎನ್‌ಜಿಟಿ ಅನುಮತಿಸಿದ ಎಲೆಕ್ಟ್ರಿಕಲ್‌ ಕಾಂಪೋ ಸ್ಟರ್‌ ಬಿನ್‌ಗಳನ್ನು ಹಾಕಲಾಗಿದೆ. ಇದಕ್ಕೆ ಪ್ರತಿದಿನ 2 ಎಚ್‌ಪಿ ಅಂದರೆ ಸುಮಾರು 4-5 ಯುನಿಟ್‌ ವಿದ್ಯುತ್‌ ಬೇಕಾಗುತ್ತದೆ. ಇದರಲ್ಲಿ ಪ್ರತಿದಿನ ಹಸಿ ಕಸ ಹಾಕಿದ ಆರು ಗಂಟೆಗಳಲ್ಲಿ ಗೊಬ್ಬರ ತಯಾರಾಗುತ್ತದೆ.

ದಿನಕ್ಕೆ 5 ಸಾವಿರ ಕೆಜಿ ಹಸಿಕಸ
ದಿನವೊಂದಕ್ಕೆ ಮಂಗಳೂರಿನ ಪ್ರತಿ ಮನೆಯಲ್ಲಿ ಕನಿಷ್ಠ 500 ಗ್ರಾಂ. ಹಸಿಕಸ ಉತ್ಪತ್ತಿಯಾಗುತ್ತದೆ. ಮಂಗಳೂರಿನಿಂದ ಪ್ರತಿದಿನ 350 ಟನ್‌ ತ್ಯಾಜ್ಯ ಪಚ್ಚನಾಡಿಯ ಡಂಪಿಂಗ್‌ ಯಾರ್ಡ್‌ಗೆ ಹೋಗುತ್ತದೆ. ಇದರಿಂದ ಅಲ್ಲಿನ ನಿವಾಸಿಗಳೊಂದಿಗೆ ಪರಿಸರಕ್ಕೂ ಅಷ್ಟೇ ಹಾನಿ ಇದೆ. ಇದರ ಬದಲಾಗಿ ನಮ್ಮ ಮನೆಯ ಕಸವನ್ನು ನಾವೇ ಗೊಬ್ಬರವಾಗಿಸುವ ಪರ್ಯಾಯ ಕ್ರಮ ಇದು. ಈ ಬಿನ್‌ ಅಳವಡಿಸಿದ ಅನಂತರ ಪ್ರತಿದಿನ 5 ಸಾವಿರ ಕೆಜಿ ಹಸಿಕಸ ಗೊಬ್ಬರಕ್ಕಾಗಿ ಈ ಬಿನ್‌ ಸೇರುತ್ತದೆ. 100 ಕೆಜಿ ಹಸಿಕಸದಿಂದ 30 ಕೆಜಿಯಷ್ಟು ಗುಣಮಟ್ಟದ ಗೊಬ್ಬರ ಸಿಗುತ್ತದೆ. ಇದನ್ನು ಗಿಡ, ಮರಗಳಿಗೆ ಉಪಯೋಗಿಸಿದರೆ ಸಮೃದ್ಧವಾಗಿ ಬೆಳೆಯುತ್ತದೆ ಎನ್ನುತ್ತಾರೆ ಜೀತ್‌ ಮಿಲನ್‌.

ಏನಿದು ಕಸ ಸಂಸ್ಕರಣೆ ಬಿನ್‌?
ಹಸಿಕಸವನ್ನು ಗೊಬ್ಬರವನ್ನಾಗಿಸುವ ಹಸುರು ಬಣ್ಣದ ಜೈವಿಕ ಬಿನ್‌ಗಳಿದ್ದು, ಇದು ಸುಲಭ ಮಾದರಿಯ ಗೊಬ್ಬರ ತಯಾರಿಕೆ ಘಟಕ. ಟ್ವಿನ್‌ ಬಿನ್‌ ಪರಿಕಲ್ಪನೆಯಲ್ಲಿ ಇದನ್ನು ಅಳವಡಿಸಲಾಗಿದೆ. ಇಲ್ಲಿ ಎರಡು ಬಿನ್‌ಗಳಿದ್ದು, ಪ್ರತಿದಿನ ಒಂದು ಬಿನ್‌ಗೆ ಹಸಿ ಕಸ ಹಾಕಿ ಅದರ ಮೇಲೆ ಸ್ವಲ್ಪ ಮೈಕ್ರೋಸ್ಟ್‌ ಹಾಕಬೇಕು. ಮೊದಲ ಬಿನ್‌ ತುಂಬಿದ ಬಳಿಕ ಎರಡನೇ ಬಿನ್‌ಗೆ ಹಾಕಬೇಕು. ಮೊದಲ ಬಿನ್‌ನಲ್ಲಿ ತುಂಬಿದ ಹಸಿ ಕಸ 20 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

Advertisement

ಅತ್ಯುತ್ತಮ ಗೊಬ್ಬರ
ನಗರದ ಪ್ರತಿಯೊಬ್ಬರೂ ತಮ್ಮ ಮನೆ, ಫ್ಲ್ಯಾಟ್‌, ಸಂಸ್ಥೆಗಳಲ್ಲಿ ಇದನ್ನು ಅಳವಡಿಸಿ ಕೊಂಡರೆ ಪಾಲಿಕೆಗೆ ಶೇ.80ರಷ್ಟು ಕಸದ ಹೊರೆ ಕಡಿಮೆಯಾಗುತ್ತದೆ. ಕೆಲವು ಫ್ಲ್ಯಾಟ್‌ಗಳಲ್ಲಿ ಅವರದೇ ಗಾರ್ಡನ್‌ಗಳಿಗೆ ಈ ಗೊಬ್ಬರವನ್ನು ಉಪಯೋಗಿಸುತ್ತಾರೆ. ಫ್ಲ್ಯಾಟ್‌ ಮಾಲಕರು ಗೊಬ್ಬರವನ್ನು ನನಗೆ ನೀಡಿದರೆ ಗಿಡಗಳಿಗೆ ಹಾಕುತ್ತೇನೆ. ಗಿಡಗಳು ಹುಲುಸಾಗಿ ಬೆಳೆಯುತ್ತವೆ.
-ಜೀತ್‌ ಮಿಲನ್‌, ಯೋಜನೆ ಮುಂದಾಳು

ಹಸಿ ಕಸದ ವಿಲೇವಾರಿ
ನಮ್ಮ ಫ್ಲ್ಯಾಟ್ನಲ್ಲಿ 16 ಮನೆಗಳಿವೆ. ಎಲ್ಲರೂ ಪ್ರತಿ ದಿನ ಹಸಿಕಸವನ್ನು ಪ್ರತ್ಯೇ ಕಿಸಿ ಇದಕ್ಕೆ ಹಾಕುತ್ತಾರೆ. ಸರಿಯಾಗಿ 21-24 ದಿನಗಳಲ್ಲಿ ಈ ಬಿನ್‌ನಲ್ಲಿದ್ದ ಕಸ ಗೊಬ್ಬರ ವಾಗಿ ಪರಿವರ್ತನೆಯಾಗುತ್ತದೆ. ಪ್ರತಿ ಶುಕ್ರವಾರ ಒಣಕಸವನ್ನು ಕಸ ವಿಲೇವಾರಿ ವಾಹನಕ್ಕೆ ನೀಡಲಾಗುತ್ತದೆ. ಈ ಬಿನ್‌ ಅಳವಡಿಸಿದ ಬಳಿಕ ಸಮಾಜಕ್ಕೆ ನಾವೂ ಕೊಡುಗೆ ನೀಡುತ್ತಿದ್ದೇವೆಂಬ ಖುಷಿ ಇದೆ.
-ಕವಿತಾ ಶೆಣೈ, ಸಾಯಿಪ್ರೇಮ್‌ ಅಪಾರ್ಟ್‌ಮೆಂಟ್‌ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next