ಸಿದ್ದಾಪುರ: ಲಾಕ್‌ಡೌನ್ ಸಡಿಲಿಕೆ ಬಳಿಕ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಉಡುಪಿ ಮೂಲದ 50 ಸಾವಿರ ಮಂದಿ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗಿನ ಜಾವದಿಂದ ಉಡುಪಿ ಜಿಲ್ಲೆಯ ಗಡಿ ಭಾಗವಾದ ಹೊಸಂಗಡಿ ಚೆಕ್ ಪೋಸ್ಟ್‌ನಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.
ಆರೋಗ್ಯ ಇಲಾಖೆ, ಶಿಕ್ಷಕರು, ಕಂದಾಯ, ಅರಣ್ಯ ಇಲಾಖೆಯ ಸಿಬಂದಿ ಹಗಲು ರಾತ್ರಿ ಪೊಲೀಸ್ ಇಲಾಖೆಯೊಂದಿಗೆ ಕರ್ತವ್ಯ ನಿರತರಾಗಿದ್ದಾರೆ.
50 ಸಾವಿರ ಜನರ ಆಗಮನ ನಿರೀಕ್ಷೆ ಹಿನ್ನೆಲೆಯಲ್ಲಿ ಈಗಿರುವ ಚೆಕ್‌ಪೋಸ್ಟ್ ನೊಂದಿಗೆ ಇನ್ನೊಂದು ಚೆಕ್‌ಪೋಸ್ಟ್ ತೆರೆಯಲಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಬಿಡಲಾಗುತ್ತಿದೆ. ದಟ್ಟಣೆ ನಿಯಂತ್ರಿಸಲು ಎರಡು ಚೆಕ್‌ಪೋಸ್ಟ್ ಮಾಡಲಾಗಿದೆ.
19 ಸಿಬಂದಿ ಇದ್ದಾರೆ. ಆರೋಗ್ಯ ಇಲಾಖೆಯಿಂದ ಇಬ್ಬರು ಡಾಕ್ಟರ್, ಮೂವರು ಆರೋಗ್ಯ ಸಹಾಯಕರು, ಗ್ರಾಮ ಸಹಾಯಕರು, ಒಬ್ಬರು ಅರಣ್ಯ ವೀಕ್ಷಕರು, ಇಬ್ಬರು ಶಿಕ್ಷಕರು, ಇಬ್ಬರು ಪೊಲೀಸ್ ಉಪನಿರೀಕ್ಷಕರು, ಇಬ್ಬರು ಎಎಸ್‌ಐ, ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಹಾಗೂ 4 ಜನ ಪೊಲೀಸ್ ಸಿಬಂದಿ ಇದ್ದಾರೆ. ಹೊಸ ಚೆಕ್‌ಪೋಸ್ಟ್‌ಗೆ ಹೆಚ್ಚಿನ ಸಿಬಂದಿ ಅಗತ್ಯವಿದೆ.
ಕಾಲ್ನಡಿಗೆಯವರಿಂದ ತೊಂದರೆ
ಪರವಾನಿಗೆ ಇಲ್ಲದಿದ್ದವರನ್ನು ಬಿಡದೆ ಇರುವುದರಿಂದ ಚೆಕ್‌ಪೋಸ್ಟ್‌ನ ತುಸು ದೂರದಿಂದ ಬಾಳೆಬರೆ ಘಾಟಿಯ ಒಂದು ಬದಿಯಿಂದ ಕಾಲ್ನಡಿಗೆಯಲ್ಲಿ ಹೊಸಂಗಡಿ ಪೇಟೆಗೆ ಬರುತ್ತಿದ್ದಾರೆ. ಹೀಗೆ ಬಂದವರನ್ನು ಸಂಬಂಧಿಕರು ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.