Advertisement

ಆರ್ಥಿಕ ಕುಸಿತಕ್ಕೆ ರಾಜ್ಯದ ಶೇ.30 ಕೈಗಾರಿಕೆಗಳು ಬಂದ್‌

09:06 PM Nov 02, 2019 | Team Udayavani |

ಮೈಸೂರು: ಆರ್ಥಿಕ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವನ್ನು ಸಂಕಷ್ಟದಿಂದ ಹೊರತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ರಾಜು ಆರ್‌. ಆಗ್ರಹಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ವ್ಯವಹಾರ ಮತ್ತು ವಹಿವಾಟಿಗಾಗಿ ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳ ಮೇಲೆ ಎಸ್‌ಎಂಇಗಳು ಅವಲಂಬಿತವಾಗಿರುವುದರಿಂದ ಈ ಸ್ಥಿತಿ ತಲೆದೋರಿದೆ. ಆಟೋಮೊಬೈಲ್‌ ಉದ್ಯಮ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದು, ಇಂಥ ಕೆಲವು ಉದ್ಯಮಗಳು ಚೇತರಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಇದೇ ರೀತಿ ರಿಯಲ್‌ ಎಸ್ಟೇಟ್‌, ಜವಳಿ ಮತ್ತು ಸಿದ್ಧ ಉಡುಪು, ಗ್ರಾಹಕರ ವಸ್ತುಗಳು, ಎಂಜಿನಿಯರಿಂಗ್‌ ಮತ್ತು ಇತರ ವಲಯಗಳೂ ಸಹ ಭಾರೀ ಸಂಕಷ್ಟಕ್ಕೆ ಸಿಲುಕಿವೆ.

ಆರ್ಥಿಕ ಹಿಂಜರಿತದಿಂದ ರಾಜ್ಯದ ಶೇ.30ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಅನೇಕ ಘಟಕಗಳು ತಮ್ಮ ವಹಿವಾಟಿನಲ್ಲಿ ತೀವ್ರ ವೈಫ‌ಲ್ಯ ಕಂಡಿವೆ. ಪಾಳಿ ಸಂಖ್ಯೆಗಳನ್ನು ಮೊಟಕುಗೊಳಿಸಲಾಗಿದೆ. ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರಾಗಿ ಕೆಲಸ ಮಾಡುತ್ತಿದ್ದ ಸುಮಾರು 20 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಆರ್ಥಿಕ ಕುಸಿತವು ಮತ್ತಷ್ಟು ಕಾಲ ಮುಂದುವರಿಯುವ ಸಾಧ್ಯತೆ ಇದ್ದು, ಇದು ಗಂಭೀರ ಕಳವಳಕ್ಕೆ ಮತ್ತೂಂದು ಕಾರಣವಾಗಿದೆ ಎಂದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ ಎರಡು ವರ್ಷಗಳಿಂದ ಇದರ ಗಾಢ ಪರಿಣಾಮ ಉಂಟಾಗುತ್ತಲೇ ಇದೆ. ಪ್ರಸ್ತುತ ಆಟೋಮೊಬೈಲ್‌, ಜವಳಿ ಮತ್ತು ಸಿದ್ಧ ಉಡುಪುಗಳು ಹಾಗೂ ಗ್ರಾಹಕರ ವಸ್ತುಗಳೂ ಸೇರಿದಂತೆ ಇತರ ತಯಾರಿಕಾ ವಲಯಗಳು ಕುಸಿತ ಕಂಡಿದ್ದು, ಇದರಿಂದ ಎಸ್‌ಎಂಇಗಳ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ.

ಅಲ್ಲದೇ ರಾಜ್ಯದ ತೀವ್ರ ಪ್ರವಾಹ ಪರಿಸ್ಥಿತಿಯು ಎಂಎಸ್‌ಎಂಇ ವಲಯದ ಮೇಲೆ ಹೆಚ್ಚುವರಿ ಪರಿಣಾಮ ಬೀರಿದೆ. ಇದಲ್ಲದೇ ನೋಟು ನಿಷೇಧ ಮತ್ತು ದೋಷಯುಕ್ತ ಜಿಎಸ್‌ಟಿ ಜಾರಿ ಸೇರಿದಂತೆ ಸರ್ಕಾರದ ಕೆಲವು ಕ್ರಮಗಳಿಂದಾಗಿ ಸೂಕ್ಷ್ಮ, ಮತ್ತು ಸಣ್ಣ ಉದ್ಯಮಗಳಿಗೆ ಈಗ ಅತ್ಯಂತ ಜಟಿಲ ಪರಿಸ್ಥಿತಿ ಎದುರಾಗಿದೆ. ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ವೇತನಗಳು ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಇಂಥ ಘಟಕಗಳ ಕಾರ್ಯನಿರ್ವಹಣೆಗೆ ಹಣಕಾಸು ಹೂಡುವುದು ಮತ್ತು ನೆರವು ಪಡೆಯುವುದು ಕಷ್ಟವಾಗಿದೆ.

Advertisement

ಎಸ್‌ಎಂಇಗಳು ಕಾರ್ಯನಿರ್ವಹಣೆಗೆ ಸೇವಾ ಸಾಲ ಸೌಲಭ್ಯ, ಓಡಿ/ಕ್ಯಾಶ್‌ ಕ್ರೆಡಿಟ್‌ಗಳ ಹಣಕಾಸು ನೆರವು ಪಡೆಯುವುದು ಕಷ್ಟವಾಗಿದೆ. ಈ ಸಮಸ್ಯೆಗಳನ್ನು ತಗ್ಗಿಸಲು ಸರ್ಕಾರ ಅನೇಕ ಕ್ರಮ ಪ್ರಕಟಿಸಿವೆ. ಆದಾಗ್ಯೂಅಲ್ಪ ಮತ್ತು ಮಧ್ಯಮ ಪ್ರಮಾಣದ ಸಾಲಗಳಿಗೆ ಸಂಬಂಧಿಸಿದಂತೆ ಕೈಗಾರಿಕೆಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಸಿಯಾ ಪದಾಧಿಕಾರಿಗಳಾದ ಕೆ.ಬಿ.ಅರಸಪ್ಪ, ಬಸವರಾಜ ಎಸ್‌.ಜವಳಿ, ಎಂ.ಜಿ.ರಾಜಗೋಪಾಲ, ಎನ್‌.ಸತೀಶ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಮೈಸೂರಿಗೆ ತಟ್ಟಿದೆ ಆರ್ಥಿಕ ಹೊಡೆತ: ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿರುವ ಮೈಸೂರಿನಲ್ಲಿ 34,063ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಹಾಗೂ ಸುಮಾರು 30 ಮಧ್ಯಮ, 45 ಭಾರೀ ಮತ್ತು 5 ಬೃಹತ್‌ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. 2.22ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಿದೆ. ಅದರಲ್ಲಿ ಎಂಎಸ್‌ಎಂಇಗಳು 2 ಲಕ್ಷ ಉದ್ಯೋಗಾವಕಾಶ ಒದಗಿಸಿವೆ.

ಮೈಸೂರಿನಲ್ಲಿರುವ ಕೈಗಾರಿಕೆಗಳು ಸಹ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದು, ಈ ಜಿಲ್ಲೆಯಲ್ಲೇ 10 ರಿಂದ 15 ಸಾವಿರ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಪ್ರಿಂಟಿಂಗ್‌, ಎಂಜಿನಿಯರಿಂಗ್‌ ಮತ್ತು ಆಟೋಮೊಬೈಲ್‌ ಬಿಡಿಭಾಗಗಳಂಥ ಬಹು ಮುಖ್ಯ ಕೈಗಾರಿಕಾ ಕ್ಲಸ್ಟರ್‌ಗಳನ್ನು ಮೈಸೂರು ಹೊಂದಿದೆ. ಇದಲ್ಲದೇ ಕರಕುಶಲ ವಸ್ತುಗಳು, ಜವಳಿ ಇತ್ಯಾದಿಯಂಥ ಸಾಂಪ್ರದಾಯಕ ಉದ್ಯಮದಲ್ಲಿಯೂ ಸಾಂಸ್ಕೃತಿಕ ನಗರ ಮೈಸೂರು ಹೆಸರುವಾಸಿಯಾಗಿದೆ.

ಕೃಷಿ ಮೂಲದ ಉದ್ಯಮಗಳು, ಹತ್ತಿ, ಉಣ್ಣೆ ಮತ್ತು ರೇಷ್ಮೆ ಜವಳಿ, ಸಿದ್ಧಉಡುಪು ಉದ್ಯಮಗಳು, ರಾಸಾಯನಿಕ, ರಬ್ಬರ್‌ ಇತ್ಯಾದಿ ಕೈಗಾರಿಕೆಗಳೊಂದಿಗೆ ಮಾತಿ ತಂತ್ರಜ್ಞಾನ(ಐಟಿ) ಉದ್ಯಮದ ಬಹು ಮುಖ್ಯ ಅಸ್ಥಿತ್ವವನ್ನು ಸಹ ಮೈಸೂರು ಹೊಂದಿದೆ. ಔಷಧಿಗಳು, ಆಹಾರ ಉತ್ಪನ್ನಗಳು, ಜವಳಿ ಮತ್ತು ಸಾಫ್ಟ್ವೇರ್‌ ಸೇರಿದಂತೆ ಪ್ರಮುಖ ವಸ್ತುಗಳು ಇಲ್ಲಿಂದ ರಫ್ತಾಗುತ್ತಿವೆ ಎಂದು (ಕಾಸಿಯಾ)ದ ಅಧ್ಯಕ್ಷ ರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next