Advertisement

ಉಡುಪಿ ಜಿಲ್ಲೆಯಲ್ಲಿ 17,824 ಹೆಕ್ಟೇರ್‌ ಭತ್ತ ನಾಟಿ

09:12 AM Jul 19, 2019 | sudhir |

ಕೋಟ: ಮುಂಗಾರು ಮಳೆಯ ಕೊರತೆಯಿಂದ ಕರಾವಳಿಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಆದರೆ ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಅಲ್ಪ ಮಳೆಯ ಮಧ್ಯೆಯೇ ರೈತರು ನಾಟಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.

Advertisement

ಇಲಾಖೆಯ ಅಂಕಿ ಅಂಶದ ಪ್ರಕಾರ ಜು. 12ರ ತನಕ ಉಡುಪಿ ಜಿಲ್ಲೆಯಲ್ಲಿ 17,824 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ನಡೆದಿದ್ದು ಇನ್ನೂ ಹೇರಳ ಪ್ರಮಾಣದ ನಾಟಿ ಬಾಕಿ ಇದೆ.

ಗುರಿ ಸಾಧನೆಗೆ ಶೇ. 50ರಷ್ಟು ಬಾಕಿ
ಕೃಷಿ ಇಲಾಖೆಯ ಲೆಕ್ಕಾಚಾರದಂತೆ 2019-20ನೇ ಸಾಲಿನ ಮುಂಗಾರು ಋತುವಿನಲ್ಲಿ ಉಡುಪಿ ಜಿಲ್ಲೆಯಲ್ಲಿ 36,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆವ ಗುರಿ ಹೊಂದಲಾಗಿದೆ. ಹೀಗಾಗಿ ಈ ಗುರಿ ಸಾಧನೆಯಾಗಬೇಕಾದರೆ ಇನ್ನೂ ಶೇ. 50ರಷ್ಟು ಕೃಷಿ ಚಟುವಟಿಕೆ ನಡೆಯಬೇಕಿದೆ.

ಒಂದು ತಿಂಗಳು ವಿಳಂಬ
ಹಿಂದೆ ಜೂನ್‌ನಲ್ಲಿ ನಾಟಿ ಕಾರ್ಯ ಆರಂಭ ಗೊಂಡು ಜು. 15ರೊಳಗೆ ಶೇ. 85ರಿಂದ 90ರಷ್ಟು ನಾಟಿ ಪೂರ್ಣಗೊಳ್ಳುತಿತ್ತು. ಆದರೆ ಈ ಬಾರಿ ಮಳೆ ಸಮಸ್ಯೆಯಿಂದಾಗಿ ನಾಟಿ ಒಂದು ತಿಂಗಳು ವಿಳಂಬ ವಾಗಿದ್ದು ಮುಂದೆ ಕಟಾವು ಕೂಡ ತಡವಾಗಲಿದೆ.

ಯಂತ್ರ ನಾಟಿಗೆ ಬೇಡಿಕೆ
ವರ್ಷದಿಂದ ವರ್ಷಕ್ಕೆ ಯಂತ್ರ ನಾಟಿಗೆ ಬೇಡಿಕೆ ಹೆಚ್ಚುತಿದೆ. ಈ ಸಾಲಿನಲ್ಲಿ ಈಸಿ ಲೈಫ್ ಯಂತ್ರಧಾರೆ ಕೇಂದ್ರಗಳ ಮೂಲಕ ಕೋಟ ಹೋಬಳಿಯಲ್ಲಿ 194 ಎಕ್ರೆ, ಕುಂದಾಪುರದಲ್ಲಿ 318 ಎಕ್ರೆ, ಕಾರ್ಕಳದಲ್ಲಿ 36 ಎಕ್ರೆ ನಾಟಿ ಕಾರ್ಯ ನಡೆದಿದೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಧಾರೆ ಕೇಂದ್ರಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 571ಎಕ್ರೆ ಯಂತ್ರ ನಾಟಿ ನಡೆದಿದೆ. ಇವೆಲ್ಲವು ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿದೆ. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಬ್ರಹ್ಮಾವರದಿಂದ ಕಳೆದ ಬಾರಿ 100 ಎಕ್ರೆ ಯಾಂತ್ರೀಕೃತ ನಾಟಿ ಮಾಡಲಾಗಿದ್ದು, ಈ ಬಾರಿ 200 ಎಕ್ರೆ ನಡೆದಿದೆ. ಖಾಸಗಿ ಗುತ್ತಿಗೆದಾರರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು ಸುಮಾರು 7ಕ್ಕೂ ಹೆಚ್ಚು ಹೊಸ ನಾಟಿ ಯಂತ್ರಗಳನ್ನು ಜಿಲ್ಲೆಯಲ್ಲಿ ಖರೀದಿಸಲಾಗಿದೆ.

Advertisement

ನೇರ ಬಿತ್ತನೆ ಕೂಡ ಅಧಿಕ
ಯಾಂತ್ರಿಕ ವಿಧಾನದ ಜತೆಗೆ ನೇರ ಬಿತ್ತನೆಯನ್ನು ಅನುಸರಿಸಿದ ರೈತರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿದೆ. ಸಾಂಪ್ರದಾಯಿಕ ಕೈ ಬಿತ್ತನೆ, ಡ್ರಮ್‌ಶಿಲ್ಡ್‌, ಕೂರಿಗೆ ವಿಧಾನ, ಸಾಲು ಬೀಜ ಮುಂತಾದ ವಿಧಾನಗಳನ್ನು ರೈತರು ಅಳವಡಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ನಾಟಿಗೆ ಆಸಕ್ತಿ ಕಡಿಮೆ
ವರ್ಷದಿಂದ ವರ್ಷಕ್ಕೆ ಯಂತ್ರ ನಾಟಿ ಬಹಳಷ್ಟು ಬೇಡಿಕೆ ಪಡೆಯುತ್ತಿದ್ದು ಈ ಬಾರಿ ಕೋಟ ಹೋಬಳಿ ವ್ಯಾಪ್ತಿಯಲ್ಲೇ 4ಕ್ಕೂ ಹೆಚ್ಚು ನಾಟಿ ಯಂತ್ರಗಳ ಖರೀದಿ ನಡೆದಿದೆ ಹಾಗೂ ನಾಟಿಯ ಪ್ರಮಾಣ ಕಳೆದ ವರ್ಷಕ್ಕಿಂತ ಅಧಿಕವಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಸಾಂಪ್ರದಾಯಿಕ ನಾಟಿಗೆ ಬೇಡಿಕೆ ಇಲ್ಲ.
-ಶಿವ ಪೂಜಾರಿ ಮಣೂರು, ಯಂತ್ರನಾಟಿ ಗುತ್ತಿಗೆದಾರರು

ಗುರಿಸಾಧನೆ ಸಾಧ್ಯವಿದೆ
ಈ ಬಾರಿ ಮಳೆ ವಿಳಂಬವಾದ್ದರಿಂದ ನಾಟಿ ಸ್ವಲ್ಪ ತಡವಾಗಿದೆ. ಆದರೆ ಪ್ರಸ್ತುತ ವೇಗವಾಗಿ ನಡೆಯುತ್ತಿದೆ. ಆಗಸ್ಟ್‌ ತನಕ ನಾಟಿ ನಡೆಸುವವರಿದ್ದಾರೆ. ಹೀಗಾಗಿ ಇಲಾಖೆಯ ನಿರ್ದಿಷ್ಟ ಗುರಿ ಸಾಧನೆ ಯಾಗಲಿದೆ. ರೈತರಿಗೆ ಅಗತ್ಯವಿರುವ ಅವಶ್ಯ ವಸ್ತುಗಳು ಇಲಾಖೆಯಲ್ಲಿ ಲಭ್ಯವಿದೆ.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next