Advertisement

ಕಲ್ಲಮುಂಡ್ಕರು ಸಹಕಾರ ಸಪ್ತಾಹ ಉದ್ಘಾಟನೆ 

02:57 PM Nov 15, 2017 | |

ಮೂಡಬಿದಿರೆ: ಕರ್ನಾಟಕ ರಾಜ್ಯ ಸಹಕಾರ ಮಂಡಲ ಬೆಂಗಳೂರು, ಜಿಲ್ಲಾ ಸಹಕಾರಿ ಯೂನಿಯನ್‌, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ಮತ್ತು ಶತಮಾನದ ಸಂಭ್ರಮದಲ್ಲಿರುವ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲ್ಲಮುಂಡ್ಕೂರು ವ್ಯ.ಸೇ. ಸ. ಸಂಘದ ‘ಸಹಕಾರಿ ಕಲ್ಪಸಿರಿ’ ಸಭಾಂಗಣದ ಮಾಲ್ದಬೆಟ್ಟು ಶ್ರೀಧರ ಪಡಿವಾಳ್‌ ಸಭಾ ಮಂಟಪದಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ವರದರಾಯ ಕಾಮತ್‌ ಅಧ್ಯಕ್ಷತೆಯಲ್ಲಿ ಜರಗಿದ 64ನೇ ಅಖೀಲ ಭಾರತ ಸಹಕಾರ
ಸಪ್ತಾಹವನ್ನು ರಾಜ್ಯ ಸಹಕಾರ ಮಹಾ ಮಂಡಲದ ನೂತನ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಉದ್ಘಾಟಿಸಿದರು.

Advertisement

‘ರೈತರು ಸಹಿತ ಸಮಾಜ ಕಟ್ಟಕಡೆಯ ವ್ಯಕ್ತಿಯನ್ನು ಸಂಪರ್ಕಿಸುವ, ಸರಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವಲ್ಲಿ ಸಹಕಾರಿರಂಗದ ಪಾತ್ರ ಮಹತ್ವಪೂರ್ಣ. ಬೇರೆಡೆ ಸರಕಾರದ ಅನುದಾನವೆಂಬ ಮಂಜುಗಡ್ಡೆ ಕರಗಿ ಕಟ್ಟಕಡೆಯ ವ್ಯಕ್ತಿಯ ಕೈಗೆ ಕೇವಲ ನೀರು ಮಾತ್ರ ಎಂಬಂಥ ಪರಿಸ್ಥಿತಿ ಇರುವಾಗ ಸಹಕಾರಿ ರಂಗದ ಮೂಲಕ ನೂರಕ್ಕೆ ನೂರರಷ್ಟು ಅರ್ಹರನ್ನು ತಲುಪಲು ಸಾಧ್ಯವಾಗುತ್ತಿದೆ. ಪಕ್ಷ ರಾಜಕೀಯದ ಸೋಂಕಿಲ್ಲದೆ ಎಲ್ಲರೂ ಸೇರಿ ಸಹಕಾರಿ ರಂಗವನ್ನು ಬೆಳೆಸಿದಾಗ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ’ ಎಂದರು

ಸಂಸದ ನಳಿನ್‌ಕುಮಾರ್‌ ಕಟೀಲು ಮಾತನಾಡಿ, ‘ಗಾಂಧೀ ಪ್ರಣೀತ ರಾಮ ರಾಜ್ಯವೇ ಗ್ರಾಮ ಸ್ವರಾಜ್ಯ, ಸರ್ವೋದಯದ
ಪರಿಕಲ್ಪನೆಯಾಗಿದ್ದು, ಈ ಹಿನ್ನೆಲೆಯಲ್ಲೇ ಬೆಳೆದ ಸಹಕಾರಿ ರಂಗ ರೈತರಿಗೆ ಬದುಕು, ಯುವಜನತೆಗೆ ನಾಯಕತ್ವ, ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡುತ್ತಿದೆ. 

ಪ್ರಧಾನಿ ಸಹಕಾರಿ ಸಂಘಗಳನ್ನು ಡಿಜಿಟಲೀಕರಣಗೊಳಿಸಲು ರೂ. 10,000 ಕೋಟಿ ವಿನಿಯೋಗದ ಮಹಾನ್‌ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ’ ಎಂದರು. ಶಾಸಕ ಕೆ. ಅಭಯಚಂದ್ರ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಸದಸ್ಯ ಸುಕುಮಾರ ಸನಿಲ್‌ ಮುಖ್ಯಅತಿಥಿಗಳಾಗಿದ್ದರು. 

ಸಹಕಾರಿ ಧ್ವಜಾರೋಹಣಗೈದ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್‌ ಅವರು, ’25 ಕೋಟಿ ಮಂದಿ ಸಹಕಾರಿಗಳಿರುವ ಸಹಕಾರಿ ಸಂಘಗಳ ಲಾಭದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕೈಬಿಡುವಂತೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದರು.

Advertisement

ಮೂಡಬಿದಿರೆ ಎಂಸಿಎಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಶುಭಾಶಂಸನೆಗೈದರು. ಶಾಸಕ ಕೆ. ಅಭಯಚಂದ್ರ ಮಾತನಾಡಿ, ಶೇ. 95ರಷ್ಟು ಮೊತ್ತ ಈಗಾಗಲೇ ಸಹಕಾರಿ ಸಂಘಗಳಿಗೆ ಒದಗಿಸಿರುವುದು ಮಹಾನ್‌ ಕ್ರಾಂತಿಯಾಗಿದೆ’ ಎಂದರು. ಬೆಸೆಂಟ್‌ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕಿ ಡಾ| ಸುಧಾ ಕೆ. ಅವರು ದಿಕ್ಸೂಚಿ ಭಾಷಣ ಮಾಡಿದರು. ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ನಿಡ್ಡೋಡಿಯ ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಸುಂದರ್‌ ಅಭಿನಂದನ ಭಾಷಣ ಮಾಡಿದರು.  

ಅಧ್ಯಕ್ಷತೆ ವಹಿಸಿದ್ದ ಕೆ. ವರದರಾಯ ಕಾಮತ್‌ ಅವರು ಮಾತನಾಡಿ, ಸಂಘವು ಬೆಳೆದುಬಂದ ಬಗೆಯನ್ನು ತಿಳಿಸಿದರು. ಹಾಗೂ ಮಿಜಾರ್‌ನಲ್ಲಿ ಶಾಖೆಯನ್ನು ತೆರೆಯಲು ಸರ್ವ ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಬ್ಯಾಂಕಿನ ನಿರ್ದೇಶಕ ಜೋಕಿಂ ಕೊರೆಯ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸಿಇಒ, ಸಾಧಕ ಕೃಷಿಕರು ಇವರನ್ನು ಗೌರವಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ, ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಸತೀಶ್‌ ಅಮೀನ್‌, ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಸಹಕಾರಿ ಯೂನಿಯನ್‌ ಪ್ರಭಾರ ಸಿಇಒ ನಾಗಪ್ರಸಾದ್‌ ಮತ್ತಿತರರಿದ್ದರು. ಸರ್ವೋದಯ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಮೂರ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next