ಮದ್ದೂರು: ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿನ್ನೆಲೆ ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣಕೂಟ ಏರ್ಪಡಿಸಲಾಗಿತ್ತು.
ಮಂಡ್ಯ ಶೈಲಿಯಲ್ಲಿ ಬಾಡೂಟವನ್ನು ತಯಾರು ಮಾಡುವುದರ ಜತೆಗೆ 8 ಟನ್ ಮಟನ್ ಮಾಂಸ, 10 ಟನ್ ಕೋಳಿ ಮಾಂಸ ಖಾದ್ಯಕ್ಕೆ ಬಳಸಲಾಗಿತ್ತು. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗೆಜ್ಜಲಗೆರೆ ಕಾಲೋನಿ ಗ್ರಾಮದಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಔತಣಕೂಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಡ್ಯ ಇತಿಹಾಸದಲ್ಲೇ ದೊಡ್ಡ ಮಟ್ಟದ ಬಾಡೂಟ ನೆರವೇರಿದ್ದು ಸುಮಾರು 50ರಿಂದ 60 ಸಾವಿರ ಮಂದಿ ಜತೆಗೆ ಗಣ್ಯಾತಿಗಣ್ಯರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು.
ಭಾವಚಿತ್ರ: ಮಂಡ್ಯ ತಾಲೂಕಿನ ಚೀರನಹಳ್ಳಿ ಅಭಿಮಾನಿಗಳು ತಮ್ಮ ಜಾನುವಾರುವಿಗೆ ಅಭಿಷೇಕ್ ಹಾಗೂ ಪತ್ನಿ ಅವಿವಾ ಭಾವಚಿತ್ರ ಬಿಡಿಸುವುದರ ಮೂಲಕ ಗಮನ ಸೆಳೆದರಲ್ಲದೆ ಸಂಸದೆ ಸುಮಲತಾ ಅಂಬರೀಶ್ ಹಾಗೂ ನವ ದಂಪತಿ ಜಾನುವಾರು ಮುಂದೆ ನಿಂತು ಫೋಟೋಗೆ ಪೋಸು ಕೊಟ್ಟಿದ್ದು ಅಭಿಮಾನಿಗಳ ಶಿಳ್ಳೆ ಚಪ್ಪಾಳೆಗೆ ಕಾರಣವಾಯಿತು.
ಆನೆಕೆರೆ ಬೀದಿ ಅಭಿಮಾನಿಗಳು ತಮ್ಮ ಜಾನುವಾರುವಿಗೆ ಅಂಬರೀಶ್ ಮತ್ತು ಕರುವಿಗೆ ಅಭಿಷೇಕ್ ಎಂದು ನಾಮಕರಣ ಮಾಡಿ ಗಮನ ಸೆಳೆದರು.
ಔತಣ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಗಣಿಗ ರವಿಕುಮಾರ್, ಮಧು ಜಿ.ಮಾದೇಗೌಡ, ದಿನೇಶ್‌ಗೂಳಿಗೌಡ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಇತರರು ಪಾಲ್ಗೊಂಡಿದ್ದರು