Advertisement

ಸಾವು-ಬದುಕಿನ ಸುತ್ತ ಅಭ್ಯಂಜನ

10:02 AM Dec 14, 2019 | mahesh |

ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ “ಹಗಲು ಕನಸು’ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು ಅಣಿಯಾಗಿದ್ದಾರೆ ದಿನೇಶ್‌ ಬಾಬು. ಅಂದಹಾಗೆ, ಆ ಚಿತ್ರಕ್ಕೆ “ಅಭ್ಯಂಜನ’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಅವರು, ಇತ್ತೀಚೆಗೆ ಪತ್ರಕರ್ತರಿಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.

Advertisement

ವಯಸ್ಸಾದ ವ್ಯಕ್ತಿ ಖಾಯಿಲೆಯಿಂದ ನರಳುತ್ತಿರುವುದನ್ನು ನೋಡಿಕೊಂಡಿರುವುದು ಸರಿನಾ ಅಥವಾ ಅಂತಹ ವ್ಯಕ್ತಿಯನ್ನು ಸಾಯಿಸುವುದು ಸರಿನಾ? ಇಂಥದ್ದೊಂದು ಎಳೆ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಸಾಮಾನ್ಯವಾಗಿ ವಯಸ್ಸಾದವರು ಖಾಯಿಲೆಗೆ ತುತ್ತಾಗಿ, ನರಳುವಾಗ, ಅವರ ಮನಸ್ಸು ನೋಯಿಸದೆ ಗೌರವದಿಂದ ಪ್ರಾಣ ತೆಗೆಯುವುದಕ್ಕೆ “ದಯಾಮರಣ’ ಎಂಬ ಹೆಸರು. ಇದು ಕಾನೂನು ಬಾಹಿರ. ಆದರೆ, ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಇಂಥದ್ದೊಂದು ಪದ್ಧತಿ ಈಗಲೂ ಇದೆ ಎಂಬುದು “ಅಭ್ಯಂಜನ’ ಚಿತ್ರ ನೋಡಿದವರಿಗೆ ಗೊತ್ತಾಗುತ್ತೆ. ಅಲ್ಲೆಲ್ಲಾ ಹರಳೆಣ್ಣೆಯನ್ನು ತಲೆಗೆ ಸವರಿ, ತಣ್ಣೀರು ಸ್ನಾನ ಮಾಡಿಸಿದ ಬಳಿಕ ನಾಲ್ಕೈದು ಎಳೆನೀರು ಕುಡಿಸುತ್ತಾರೆ. ಅದರಿಂದ ಇಡೀ ದೇಹ ತಣ್ಣಗಾಗುತ್ತಾ, ಕೊನೆಗೆ ಉಸಿರಾಟ ನಿಂತು ಹೋಗುತ್ತದೆ. ಇದೇ ಕಥೆಯ ಎಳೆ ಚಿತ್ರದಲ್ಲಿದೆ.

ಕಥೆ ಬಗ್ಗೆ ಹೇಳುವುದಾದರೆ, ಹೀರೋ ದಿನಸಿ ಅಂಗಡಿ ಮಾಲೀಕ. ಪತ್ನಿ ಹಾಗೂ ಮಗು ಮತ್ತು ಖಾಯಿಲೆಯಲ್ಲಿ ನರಳುತ್ತಿರುವ ತಂದೆ ಜೊತೆ ವಾಸ. ತಾತನಿಗೆ ಮೊಮ್ಮಗನೆಂದರೆ ಪ್ರೀತಿ. ಆದರೆ, ಅಪ್ಪನ ಆರೋಗ್ಯ ಖರ್ಚು ನೋಡಿಕೊಳ್ಳಲು ಸಾಲ ಮಾಡಿದರೂ ಅದು ಸಾಕಾಗಲ್ಲ. ಅತ್ತ ಹೆಂಡತಿ ಖುಷಿಪಡಿಸಬೇಕು, ಇತ್ತ ತಂದೆ ನೋಡಿಕೊಳ್ಳಬೇಕು. ಕೊನೆಗೆ, ಮಾವನನ್ನು ನೋಡಿಕೊಳ್ಳಲಾಗದೆ, ಪತ್ನಿ ಎಣ್ಣೆ ನೀರು ಸ್ನಾನದ ಬಗ್ಗೆ ವಿವರಿಸಿದಾಗ, ವಿರೋಧ ವ್ಯಕ್ತವಾಗುತ್ತೆ. ಕೊನೆಗೊಂದು ಘಟನೆ ಸಂಭವಿಸುತ್ತೆ. ಅದೇನು ಎಂಬುದೇ ಸಸ್ಪೆನ್ಸ್‌.

ಚಿತ್ರದಲ್ಲಿ ಕರಿಸುಬ್ಬು ತಂದೆಯಾಗಿ ನಟಿಸಿದರೆ, ಮಗನಾಗಿ ನಾರಾಯಣಸ್ವಾಮಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಭಾರದ್ವಾಜ್‌, ಮಾಸ್ಟರ್‌ ಮಂಜುನಾಥ್‌, ಭಾಗ್ಯಶ್ರೀ, ನಾಗರಾಜ್‌ ಶಾಂಡಿಲ್ಯ ಇತರರು ನಟಿಸಿದ್ದಾರೆ. ಮಹರಾಜ ಸಂಗೀತ ನೀಡಿದ್ದಾರೆ. ನಿರ್ದೇಶಕ ದಿನೇಶ್‌ ಬಾಬು, ಕಥೆ, ಚಿತ್ರಕಥೆ ಜೊತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಬಹುತೇಕ ಚಾಮರಾಜನಗರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಗ್‌ ತಯಾರಿಕೆಯಲ್ಲಿ ಜನಪ್ರಿಯರಾಗಿರುವ ನಾಗೇಶ್ವರರಾವ್‌ ನಿರ್ಮಾಪಕರು. ಇದು ಅವರ 20 ನೇ ಚಿತ್ರ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next