Advertisement

Archery World Cup Stage 3: ಚಿನ್ನ ಗೆದ್ದ ಅಭಿಷೇಕ್‌ ವರ್ಮ

11:37 PM Jun 18, 2023 | Team Udayavani |

ಮೆಡೆಲಿನ್‌ (ಕೊಲಂಬಿಯ): ಭಾರತದ ಅಭಿಷೇಕ್‌ ವರ್ಮ ಅವರು ಇಲ್ಲಿ ಸಾಗುತ್ತಿರುವ ವಿಶ್ವಕಪ್‌ ಆರ್ಚರಿ ಮೂರನೇ ಹಂತದ ಪುರುಷರ ಕಾಂಪೌಂಡ್‌ ವೈಯಕ್ತಿಯ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಪದಕಗಳ ಪಟ್ಟಿಗೆ ಇನ್ನೊಂದು ಪದಕ ಸೇರಿಸಿದ್ದಾರೆ.

Advertisement

2014ರ ಇಂಚಿಯಾನ್‌ ಏಷ್ಯನ್‌ ಗೇಮ್ಸ್‌ನ ಕಾಂಪೌಂಡ್‌ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ವೈಯಕ್ತಿಕವಾಗಿ ಬೆಳ್ಳಿ ಜಯಿಸಿದ್ದ 33ರ ಹರೆಯದ ಅಭಿಷೇಕ್‌ ಫೈನಲ್‌ ಹೋರಾಟದಲ್ಲಿ ಅಮೆರಿಕದ ಜೇಮ್ಸ್‌ ಲುಟ್ಜ್ ಅವರನ್ನು 148-146 ಅಂತರದಿಂದ ಸೋಲಿಸಿದರು.

ವಿಶ್ವಕಪ್‌ನಲ್ಲಿ ಹಲವು ಚಿನ್ನದ ಪದಕ ಗೆದ್ದಿರುವ ಅಭಿಷೇಕ್‌ ಈ ವಿಶ್ವಕಪ್‌ನ ಮೊದಲೆರಡು ಹಂತಗಳಲ್ಲಿ ಆಡಿರಲಿಲ್ಲ. ಮೂರನೇ ಹಂತದ ಈ ಹಿಂದಿನ ಸುತ್ತುಗಳಲ್ಲಿ ಅವರು ವಿಶ್ವದ ನಂಬರ್‌ ವನ್‌ ಮತ್ತು ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌ನ ಮೈಕ್‌ ಸ್ಕೋಸ್ಸರ್‌ ಅವರನ್ನು ಶೂಟ್‌ ಆಫ್ನಲ್ಲಿ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದ್ದರು. ಎಂಟನೇ ಶ್ರೇಯಾಂಕದ ವರ್ಮ ಆಬಳಿಕ ಬ್ರಝಿಲ್‌ನ ಲುಕಾಸ್‌ ಅಬ್ರೆಯು ಅವರನ್ನು ಸೋಲಸಿ ಫೈನಲಿಗೇರಿದ್ದರು.

ಇದು ವಿಶ್ವಕಪ್‌ನಲ್ಲಿ ಅಭಿಷೇಕ್‌ ಪಡೆದ ಮೂರನೇ ವೈಯಕ್ತಿಕ ಚಿನ್ನವಾಗಿದೆ. 2021ರ ಪ್ಯಾರಿಸ್‌ ಬಳಿಕ ಗೆದ್ದ ಮೊದಲ ಪದಕವೂ ಆಗಿದೆ. 2015ರಲ್ಲಿ ಪೋಲಂಡಿನ ವ್ರೊಕ್ಲಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು ಮೊದಲ ಬಾರಿ ಚಿನ್ನ ಜಯಿಸಿದ್ದರು. ವಿಶ್ವಕಪ್‌ನಲ್ಲಿ ಅವರು ಈ ಹಿಂದೆ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ್ದರು.

ಭಾರತೀಯ ತಂಡ ಈ ವಿಶ್ವಕಪ್‌ನಲ್ಲಿ ಇದೀಗ ಒಂದು ಚಿನ್ನ ಸಹಿತ ಮೂರು ಕಂಚಿನ ಪದಕ ಗೆದ್ದುಕೊಂಡಿದೆ. ರಿಕರ್ವ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಅವಕಾಶ ಪಡೆದಿದೆ. ಈ ತಂಡ ಫ್ರಾನ್ಸ್‌ ಮತ್ತು ನೆದರ್ಲೆಂಡ್ಸ್‌ ತಂಡವನ್ನು ಸೋಲಿಸಿ ಸೆಮಿಫೈನಲಿಗೇರಿತ್ತು. ಆದರೆ ಅಲ್ಲಿ ಕೊರಿಯಕ್ಕೆ ಶರಣಾಗಿತ್ತು. ಇದೀಗ ಕಂಚಿನ ಪದಕಕ್ಕಾಗಿ ಚೈನೀಸ್‌ ತೈಪೆ ಜತೆ ಹೋರಾಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next