Advertisement

“ಅಭಿಯ ಆತ್ಮಸ್ಥೈರ್ಯ ತಾಯಿಯಿಂದ ಬಂದಿದ್ದು’

12:30 AM Mar 02, 2019 | Team Udayavani |

“ಪಾಕಿಸ್ಥಾನದ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದರೂ ಕಿಂಚಿತ್ತೂ ಎದೆಗುಂದದೆ ಇದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ರ ಸ್ಥಿತಪ್ರಜ್ಞತೆ ಅವರಿಗೆ ಅವರ ತಾಯಿಯಿಂದ ಬಂದಿದ್ದು’. ಹೀಗೆಂದಿದ್ದು, ಅಭಿನಂದನ್‌ ಕುಟುಂಬದ ಜತೆಗೆ ಹಲವಾರು ದಶಕಗಳಿಂದ ಸ್ನೇಹ ಹೊಂದಿರುವ, ಭಾರತೀಯ ಸೇನೆಯ ನಿವೃತ್ತ ಗ್ರೂಪ್‌ ಕಮಾಂಡರ್‌ ತರುಣ್‌ ಕೆ. ಸಿಂಘ.

Advertisement

ಅಭಿನಂದನ್‌ ಬಿಡುಗಡೆ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “”ಅಭಿನಂದನ್‌ ತಾಯಿ ಡಾ. ಶೋಭಾ ವರ್ಧಮಾನ್‌ ಒಬ್ಬ ದಿಟ್ಟ  ಹಾಗೂ ಸಮಚಿತ್ತದ ಹೆಣ್ಣುಮಗಳು. ಮೂಲತಃ ಅರಿವಳಿಕೆ ತಜ್ಞರಾದ ಅವರು, ತಮ್ಮ ವೃತ್ತಿಜೀವನದಲ್ಲಿ  ಹೈಟಿ, ಐವರಿ ಕೋಸ್ಟ್‌ , ಪಪುವಾ ಗಿನಿಯಾ ಸೇರಿದಂತೆ ಹಲವಾರು ಯುದ್ಧಪೀಡಿತ ಅಥವಾ ನಿರ್ಗತಿಕ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೈಲ ದಂಧೆಕೋರರ ರಕ್ತಸಿಕ್ತ ಇತಿಹಾಸ ಇರುವ, ಲೈಬೀರಿಯಾ, ನೈಜೀರಿಯಾ ಸೇರಿದಂತೆ ಇರಾಕ್‌ ಯುದ್ಧದ ವೇಳೆಯಲ್ಲೂ ಅಲ್ಲಿನ ಜನರ, ಸೈನಿಕರ ಸೇವೆ ಮಾಡಿದ್ದಾರೆ. ಇರಾಕ್‌ನಲ್ಲಿದ್ದಾಗ ಹಲವಾರು ಬಾರಿ ಸಾವಿನ ಸನಿಹಕ್ಕೆ ಹೋಗಿ ಪಾರಾಗಿ ಬಂದಿದ್ದಾರೆ” ಎಂದು ವಿವರಿಸಿದರು. 

ನೈಜೀರಿಯಾ, ಇರಾಕ್‌ನಂಥ ದೇಶಗಳಲ್ಲಿದ್ದಾಗ ಸುತ್ತಮುತ್ತಲೂ, ಬುಲೆಟ್‌ಗಳ ಮಳೆ ಸುರಿಯುತ್ತಿದ್ದರೂ, ಬಾಂಬುಗಳು ಹತ್ತಿರದಲ್ಲೇ ಬೀಳುತ್ತಿದ್ದರೂ, ಕಿಂಚಿತ್ತೂ ಎದೆಗುಂದದೆ ಸೇವೆ ಮಾಡಿದ್ದ ಅವರು, ಕೆಲವು ಜಾಗಗಳಿಗೆ ಹೋಗದಂತೆ ಅಲ್ಲಿನ ಸರಕಾರಗಳೇ ಎಚ್ಚರಿಸಿದ್ದರೂ, ಆ ಜಾಗಗಳಲ್ಲಿ ನೋವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಏಕಾಂಗಿ ಆ ಜಾಗಗಳಿಗೆ ಹೋಗಿ ಗಾಯಗೊಂಡವರನ್ನು ಶುಶ್ರೂಷೆ ಮಾಡಿ ಬರುತ್ತಿದ್ದರು.  ಅದೇ ಕೆಚ್ಚೆದೆ, ಅದೇ ಆತ್ಮಸ್ಥೈರ್ಯ ಅವರ ಮಗ ಅಭಿನಂದನ್‌ಗೆ ರಕ್ತಗತವಾಗಿ ಬಂದಿವೆ” ಎಂದು ಸಿಂಘಾ ಹೇಳಿದರು. ಆ ಮೂಲಕ, ಮಗನನ್ನು ಶಿಸ್ತಿನ ಸಿಪಾಯಿಯಾಗಿ ರೂಪಿಸಿದ ಅವರ ತಾಯಿಯಲ್ಲಿರುವ “ಅಗೋಚರ ಯೋಧ’ನನ್ನು ಅವರು ಸ್ಮರಿಸಿಕೊಂಡರು.

“ಮಿಗ್‌’ ಹಾರಾಟದ‌ ಕುಟುಂಬ!
ಪಾಕಿಸ್ಥಾನದ ವಶದಲ್ಲಿದ್ದ ಅಭಿನಂದನ್‌ ವರ್ಧಮಾನ್‌ ಅವರು, ಮಿಗ್‌ 21 ಹಾರಾಟ ನಡೆಸುವ ಪೈಲಟ್‌ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರ ತಂದೆ ಕೂಡ ಮಿಗ್‌ ವಿಮಾನಗಳ ಹಾರಾಟ ನಡೆಸುತ್ತಿದ್ದವರೇ. ಇನ್ನು, ಅವರ ತಾತ ಸಹ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದವರು. ಹಾಗೆ ನೋಡಿದರೆ, ವಧ‌ìಮಾನ್‌ ಅವರ ಕುಟುಂಬವನ್ನು “ಮಿಗ್‌ ಕುಟುಂಬ’ ಎಂದು ಕರೆಯಲಡ್ಡಿಯಿಲ್ಲ ಎಂದು ಮುಂಬೈನಲ್ಲಿರುವ, ವಾಯುಪಡೆಯ ನಿವೃತ್ತ ವಿಂಗ್‌ ಕಮಾಂಡರ್‌ ಪ್ರಕಾಶ್‌ ನಾವಲೆ ಹೇಳುತ್ತಾರೆ. 1969-72ರ ಅವಧಿಯಲ್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ (ಎನ್‌ಡಿಎ), ಅಭಿನಂದನ್‌ ತಂದೆ ಸಿಂಹಕುಟ್ಟಿ ವರ್ಧಮಾನ್‌ ತರಬೇತಿ ಪಡೆಯುತ್ತಿದ್ದ ಹೊತ್ತಿನಲ್ಲೇ ಪ್ರಕಾಶ್‌ ಕೂಡ ಅದೇ ಸಂಸ್ಥೆಯಲ್ಲಿ ಓದುತ್ತಿದ್ದರು. ಅಂದಿನ ದಿನಗಳನ್ನು ಮೆಲುಕು ಹಾಕಿರುವ ಅವರು, ಅಭಿನಂದನ್‌ನನ್ನು ನಾನು ನೋಡಿದ್ದಾಗ ಆತ ಮೂರು ತಿಂಗಳ ಮಗು. ಆಗ ನೋಡಿದ್ದ ಅವನನ್ನು ಪುನಃ ನಾನು ನೋಡುತ್ತಿರುವುದು ಈಗಲೇ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next