ಕನ್ನಡದಲ್ಲೀಗ ಮಕ್ಕಳ ಚಿತ್ರಗಳ ಕಲರವ ಅಂದರೆ ತಪ್ಪಿಲ್ಲ. ಸದ್ದಿಲ್ಲದೆಯೇ ಒಂದಷ್ಟು ಮಕ್ಕಳ ಚಿತ್ರಗಳು ಸೆಟ್ಟೇರುತ್ತಿವೆ. ಆ ಸಿನಿಮಾ ಮೂಲಕ ಬಾಲಕಲಾವಿದರ ಆಗಮನವಾಗುತ್ತಿದೆ ಕೂಡಾ. ಆ ಸಾಲಿಗೆ ಹೊಸ ಸೇರ್ಪಡೆ ಅಭಿಜಯ್ ಜೋ. ಮೂರನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಭಿಜಯ್, “ಮಿಂಚುಹುಳು’, “ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾನೆ.
“ಮಿಸ್ಸಿಂಗ್ ಬಾಯ್’ ಚಿತ್ರದಲ್ಲೂ ಅಭಿಜಯ್ ನಟಿಸಿದ್ದು, ಇದೀಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನೆಲೆಕಂಡುಕೊಳ್ಳುವ ಆಸೆ ಇಟ್ಟುಕೊಂಡಿರುವ ಅಭಿಜಯ್‌ಗೆ ಒಳ್ಳೆಯ ಚಿತ್ರದಲ್ಲಿ ಅವಕಾಶ ಸಿಗುತ್ತಿರುವ ಬಗ್ಗೆ ಹೆಮ್ಮೆ ಇದೆ. ಧಾರವಾಡ ಮೂಲದ ರಿತೇಶ್ ಜೋ ಮತ್ತು ರಾಧಿಕಾ ದಂಪತಿಯ ಪುತ್ರ ಅಭಿಜಯ್ ಜೋ ಚಿಕ್ಕಂದಿನಲ್ಲೇ ಸಂಗೀತ ಮತ್ತು ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡವನು.
ಅಭಿಜಯ್ ಒಳಗಿರುವ ಪ್ರತಿಭೆ ಕಂಡ ಪೋಷಕರು, ಪ್ರೋತ್ಸಾಹಕ್ಕೆ ಮುಂದಾದರು. ಅಭಿಜಯ್ ಈಗಾಗಲೇ ಕೆಲ ನಟನೆ ತರಬೇತಿ ಶಿಬಿರಗಳಲ್ಲಿ ಒಂದಷ್ಟು ಕಲಿತಿದ್ದಾನೆ. ಅಭಿಜಯ್ ಮೊದಲು ಕ್ಯಾಮೆರಾ ಮುಂದೆ ನಿಂತಿದ್ದು, ಜಾಹಿರಾತು ಮೂಲಕ. ಹಲವು ಜಾಹಿರಾತುಗಳಲ್ಲಿ ನಟಿಸಿರುವ ಅಭಿಜಯ್, ಎಲ್ಲರ ಮೆಚ್ಚುಗೆಯನ್ನೂ ಪಡೆದಿದ್ದಾನೆ. ಆಶೀರ್ವಾದ್ ಅಟಾ, ಕನೆಕ್ಟ್ ಇಂಡಿಯಾ, ಮ್ಯಾಕ್ಸ್ ಫ್ಯಾಷನ್, ಯುನೈಟೆಡ್ ವಾಶ್, ಟಿಎಸ್ ವಿಕ್ಟರ್ ಸೇರಿದಂತೆ ಒಂದಷ್ಟು ಜಾಹಿರಾತುಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾನೆ.
“ಮಿಸ್ಸಿಂಗ್ ಬಾಯ್’ ಅಭಿಜಯ್ ಮೊದಲ ಚಿತ್ರ. ಈ ಚಿತ್ರದಲ್ಲಿ ಅಭಿಜಯ್‌ಗೆ ಪ್ರಧಾನ ಪಾತ್ರ ಸಿಕ್ಕಿದೆ. ಬರೀ ನಟನೆಯಷ್ಟೇ ಅಲ್ಲ, ಅಭಿಜಯ್‌ಗೆ ಡ್ರಮ್ಸ್ ಕೂಡ ಇಷ್ಟ. ಅದರಲ್ಲೂ ಪರಿಸರ ಅಂದರೆ ಎಲ್ಲಿಲ್ಲದ ಪ್ರೀತಿ. ಸದ್ಯಕ್ಕೆ ಓದು ಮತ್ತು ನಟನೆ ಬಗ್ಗೆ ಗಮನಹರಿಸುತ್ತಲೇ, ತಾನು ಬಾಲನಟನಾಗಿ ಮೆಲ್ಲನೆ ಗುರುತಿಸಿಕೊಳ್ಳುತ್ತಿದ್ದಾನೆ.