“ನಾಯಕ- ನಾಯಕಿ ಬರ್ತಿದ್ದಾರೆ, ಗೊತ್ತಲ್ಲ ನಿಮ್ಗೆ ಬೆಂಗಳೂರು ಟ್ರಾಫಿಕ್… ಸ್ವಲ್ಪ ಹೊತ್ತಲ್ಲೇ ಬಂದು ಜಾಯಿನ್ ಆಗ್ತಾರೆ …’ – ನಿರೂಪಕಿ ಹೀಗೆ ಹೇಳುತ್ತಲೇ ಇದ್ದರು. ಆದರೆ, ಸಂಜೆ ಪತ್ರಿಕಾಗೋಷ್ಠಿ ಮುಗಿದು ಗ್ಲಾಸ್‌ಗಳು ಸದ್ದು ಮಾಡಲಾರಂಭಿಸಿದರೂ ನಾಯಕ-ನಾಯಕಿ ಪಾತ್ರ ಪತ್ರಿಕಾಗೋಷ್ಠಿಗೆ ಬರಲೇ ಇಲ್ಲ. ಅಂದಹಾಗೆ, ಅದು “ಅಭಿಸಾರಿಕೆ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.
ಈ ಚಿತ್ರದಲ್ಲಿ ತೇಜ್ ಹಾಗೂ ಸೋನಾಲ್ ಮಾಂಟೇರೋ ಈ ಚಿತ್ರದ ನಾಯಕ-ನಾಯಕಿ. ಅವರಿಬ್ಬರು ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. “ಅಭಿಸಾರಿಕೆ’ ಕೂಡಾ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ಈ ಚಿತ್ರವನ್ನು ಮಧುಸೂದನ್ ನಿರ್ದೇಶಿಸಿದ್ದಾರೆ. ಈ ಹಿಂದೆ “ಗಣಪ’, “ಕರಿಯ-2′ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿದ್ದ ಮಧು ಅವರಿಗೆ “ಅಭಿಸಾರಿಕೆ’ ಚೊಚ್ಚಲ ಸಿನಿಮಾ.
“ಚಿತ್ರರಂಗದಲ್ಲಿ ಜನ ಗುರುತಿಸಬೇಕಾದರೆ ಏನಾದರೂ ಹೊಸತನ ಮಾಡಬೇಕು. ಹಾಗಾಗಿ ಕಥೆಗೆ ಸಾಕಷ್ಟು ಸಮಯ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ಇದು ಮಾಮೂಲಿ ಸಿನಿಮಾವಲ್ಲ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳಿಕೊಂಡರು. ಇದು ಹಾರರ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಚಿತ್ರದಲ್ಲಿ ಲವ್‌ಸ್ಟೋರಿಯೂ ಇದ್ದು, ಅದಕ್ಕೆ ಹಾರರ್ ಅನ್ನು ಸೇರಿಸಿದ್ದಾರೆ.
ಹಾಗಾಗಿ, ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸ ಅವರಿಗಿದೆ. ಅಭಿ ಹಾಗೂ ಸಾರಿಕೆಯ ಲವ್‌ಸ್ಟೋರಿ ಇದಾಗಿರುವುದರಿಂದ ಚಿತ್ರಕ್ಕೆ “ಅಭಿಸಾರಿಕೆ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಶಿವಕುಮಾರ್ ಹಾಗೂ ಪ್ರಶಾಂತ್ ಕೊಡೆYದಾರ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಮರು ಮಾತನಾಡದೇ, ಯಾವಾಗ ಸಿನಿಮಾ ಶುರು ಮಾಡುವ ಎಂದು ಕೇಳಿದರಂತೆ.
ಚಿತ್ರದಲ್ಲ ಯಶ್ ಶೆಟ್ಟಿ ವಿಲನ್ ಆಗಿ ನಟಿಸಿದ್ದಾರೆ. ಹಾಗಂತ ಸಿನಿಮಾ ನೋಡಿದವರಿಗೆ ಇವರು ವಿಲನ್ ಎನಿಸೋದಿಲ್ಲ. ಆ ತರಹದ ಸೈಕೋಪಾತ್ರವಂತೆ. ನಿರ್ದೇಶಕರು ನಟಿಸಿ ತೋರಿಸುತ್ತಿದುದನ್ನು ನೋಡಿ, “ನೀವೇ ಈ ಪಾತ್ರ ಮಾಡಿ’ ಎಂದರಂತೆ ಯಶ್. ಇಲ್ಲಿ ಅವರು ಸುನೀಲ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕರಣ್ ಬಿ ಕೃಪಾ ಸಂಗೀತ ನೀಡಿದ್ದು, ಚಿತ್ರದಲ್ಲಿ ಮೂರು ಮೆಲೋಡಿ ಹಾಡುಗಳಿವೆಯಂತೆ. ಅಂದಹಾಗೆ, ಚಿತ್ರದ ಆಡಿಯೋ ಬಿಡುಗಡೆಗೆ ನಟರಾದ ಜೆಕೆ, ರವಿಕಿರಣ್, ನಟಿ ಅಭಿನಯ, ವಿತರಕ ಮಹೇಶ್ ಕೊಠಾರಿ ಆಗಮಿಸಿ, ಚಿತ್ರಕ್ಕೆ ಶುಭಕೋರಿದರು.