ಮೈಸೂರು: ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಅವರ ಕುರಿತ ಹೇಳಿಕೆ ಹಿನ್ನೆಲೆ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಾ. ಗೀತಾ ಮಹದೇವಪ್ರಸಾದ್ ಬಗ್ಗೆ ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಸಾಮಾನ್ಯವಾಗಿ ಯಾವುದೇ ಜನಪ್ರತಿನಿಧಿ ನಿಧನರಾದರೇ ಪಕ್ಷಗಳೇ ಕುಟುಂಬಸ್ಥರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತವೆ. ಆದರೆ ಮಹದೇವಪ್ರಸಾದ್ ನಿಧನವಾದ ಕೇವಲ ಮೂರೇ ದಿನದಲ್ಲಿ ಗೀತಾ ಮಹದೇವಪ್ರಸಾದ್ ತಾವೇ ಅಭ್ಯರ್ಥಿ ಹೇಳಿದ್ದರು.
ಈ ಕಾರಣದಿಂದ ಇದನ್ನು ಉಲ್ಲೇಖೀಸಿ, ಗೀತಾ ಅವರಿಗೆ ಪತಿಯ ನಿಧನದ ನೋವಿನ ಜತೆಯಲ್ಲಿ ಅಧಿಕಾರದ ಆಸೆಯೂ ಇತ್ತು ಎಂಬ ಹೇಳಿಕೆ ನೀಡಿದ್ದೇ. ಆದರೂ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಹೇಳಿಕೆಯನ್ನು ನಾನು ಹಿಂಪಡೆಯುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಭಾಗೆ ಸಿಎಂ ಅಭಯವಿದೆ: ರಾಜ್ಯದ ಪವರ್‌ಪುಲ್ ಲೇಡಿ ಪ್ರಭಾ ಬೆಳವಂಗಲ ಅವರಿಗೆ ಸಿಎಂ ಸಿದ್ದರಾಮಯ್ಯರ ಅಭಯವಿದೆ. ಪ್ರಭಾ ಬೆಳವಂಗಲ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಹೀಗಾಗಿ ಇದನ್ನು ಪ್ರಶ್ನಿಸಿ ತಾವು ಪ್ರಭಾ ಬೆಳವಂಗಲ ವಿರುದ್ಧ ಬೆಂಗಳೂರಿನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್‌ಗೆ ದೂರು ನೀಡಿದ್ದೆ.
ದೂರು ನೀಡುವ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಭಾ ಅವರನ್ನು ಬಂಧಿಸಬಹುದು ಎಂದು ಪ್ರವೀಣ್ ಸೂದ್ ಹೇಳಿದ್ದರು. ಆದರೆ ಅದೇ ದಿನದಂದು ಪ್ರಭಾ ಬೆಳವಂಗಲ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದರೂ, ಹೀಗಿದ್ದರೂ ಪೊಲೀಸರು ಅವರನ್ನು ಏಕೆ ಬಂಧಿಸಿಲ್ಲ. ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಕಾನೂನಿಗೆ ನಿಷ್ಠರಾಗಿದ್ದಾರೋ?
ಅಥವಾ ತಮ್ಮನ್ನು ಆಳುವ ರಾಜಕೀಯ ನಾಯಕರಿಗೆ ನಿಷ್ಠೆಯಾಗಿದ್ದಾರೋ? ಎಂದು ಪ್ರಶ್ನಿಸಿದರು. ಅಲ್ಲದೆ ತಮ್ಮ ವಿರುದ್ಧ ಐಟಿ ಕಾಯ್ದೆಯಡಿ ದೂರು ದಾಖಲಿಸಿದ್ದು, ಮಾಧ್ಯಮಗಳಲ್ಲಿ ನೀಡುವುದಕ್ಕೂ ಐಟಿ ಕಾಯ್ದೆಗೂ ಸಂಬಂಧವೇನು? ಎಂಬುದನ್ನು ಕಾನೂನಿನ ಜ್ಞಾನ ಹೊಂದಿರುವ ಪ್ರವೀಣ್ ಸೂದ್ ಅವರೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.