ಹೊಸದಿಲ್ಲಿ: ಕೋಲ್ಕತದ ಆಸ್ಪತ್ರೆಯಲ್ಲಿ ತರಬೇತಿನಿರತ ವೈದ್ಯೆ (ಅಭಯಾ) ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಶನಿವಾರ ಮುಷ್ಕರ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಅಭಯವನ್ನು ಕೇಂದ್ರ ಸರಕಾರ ನೀಡಿದ್ದು, ಅದಕ್ಕಾಗಿ ಸಮಿತಿ ರಚಿಸುವುದಾಗಿ ವಾಗ್ಧಾನ ಮಾಡಿದೆ. ಅಲ್ಲದೆ ಘಟನೆಯನ್ನು ಖಂಡಿಸಿ ದೇಶದ ಹಲವೆಡೆ ವೈದ್ಯರು ನಡೆಸುತ್ತಿರುವ ಮುಷ್ಕರ ಕೈಬಿಟ್ಟು ವೈದ್ಯಕೀಯ ಸೇವೆಗೆ ವಾಪಸಾಗಬೇಕು ಎಂದು ಮನವಿ ಮಾಡಿದೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ), ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಎಫ್ಒಆರ್‌ಡಿಎ), ದಿಲ್ಲಿ ಸರಕಾರಿ ವೈದ್ಯ ಕಾಲೇಜುಗಳ ರೆಸಿಡೆಂಟ್ ವೈದ್ಯರ ಸಂಘಟನೆಗಳು ಸದಸ್ಯರು ಶನಿವಾರ ಹೊಸದಿಲ್ಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಜತೆ ಸಮಾಲೋಚನೆ ನಡೆಸಿದ್ದಾರೆ. ಕೆಲಸದ ವೇಳೆ ಆರೋಗ್ಯ ವೃತ್ತಿಪರರ ಸುರಕ್ಷೆ ಮತ್ತು ಭದ್ರತೆಯ ಬಗ್ಗೆ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ವೈದ್ಯರ ಬೇಡಿಕೆಗಳನ್ನು ಸಾವಧಾನವಾಗಿ ಆಲಿಸಿದ ಕೇಂದ್ರ ಆರೋಗ್ಯ ಸಚಿವರು, ಆರೋಗ್ಯ ಕ್ಷೇತ್ರದ ವೃತ್ತಿಪರರ ಸುರಕ್ಷೆಗಾಗಿ ಸಮಿತಿಯನ್ನು ರಚಿಸಲು ಸರಕಾರ ತೀರ್ಮಾನಿಸಿದೆ. ರಾಜ್ಯ ಸರಕಾರಗಳ ಸಹಿತ ಸಂಬಂಧಿಸಿದ ಎಲ್ಲರೂ ಈ ಸಮಿತಿಗೆ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಪ್ರಸ್ತಾವನೆ ಮುಂದಿಟ್ಟರು ಎಂದು ಸಭೆಯ ಅನಂತರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಸರಕಾರ ತಿಳಿಸಿದೆ.
ಈಗಾಗಲೇ 26 ರಾಜ್ಯಗಳು ಈ ಸಂಬಂಧ ಕಾಯ್ದೆ ಗಳನ್ನು ಜಾರಿಗೆ ತಂದಿವೆ ಎಂಬ ಅಂಶವನ್ನೂ ಸಭೆಯಲ್ಲಿ ಮಂಡಿಸಿ, ಚರ್ಚೆ ನಡೆಸಲಾಗಿದೆ. ವೈದ್ಯರ ಪ್ರತಿನಿಧಿಗಳು ವ್ಯಕ್ತಪಡಿಸಿದ ಕಳವಳಗಳನ್ನು ಗಮನದಲ್ಲಿ ಇರಿಸಿಕೊಂಡು, ಆರೋಗ್ಯ ವೃತ್ತಿಪರರ ಸುರಕ್ಷೆಯನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಸರಕಾರ ವೈದ್ಯರಿಗೆ ಭರವಸೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ವೈದ್ಯಕೀಯ ಸಂಘವು, ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನೀಡಿದ ಅಭಯದ ಮಾತುಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ. ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಅದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದೆ.
ಸರಕಾರದ ಭರವಸೆ
ಆರೋಗ್ಯ ಕ್ಷೇತ್ರದ ವೃತ್ತಿಪರರ ಸುರಕ್ಷೆಗೆ ಸಂಬಂಧಿಸಿ ಸಮಿತಿ ರಚನೆ
ರಾಜ್ಯ ಸರಕಾರಗಳ ಸಹಿತ ಎಲ್ಲರೂ ಈ ಸಮಿತಿಗೆ ತಮ್ಮ ಸಲಹೆಗಳನ್ನು ನೀಡಬಹುದು
ವೈದ್ಯರ ಸುರಕ್ಷೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು