ಕಾಸರಗೋಡು/ಕಲ್ಲಿಕೋಟೆ: ಕೇರಳದಿಂದ 21 ಜನರನ್ನು ಅಫ್ಘಾನಿಸ್ತಾನಕ್ಕೆ ಕರೆದೊಯ್ದು ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದ ಹಾಗೂ ಕೇರಳದ ಐಸಿಸ್ ಉಗ್ರ ಸಂಘಟನೆ ವಿಭಾಗದ ಮುಖ್ಯಸ್ಥನೂ ಆಗಿದ್ದ ತೃಕ್ಕರಿಪುರ ನಿವಾಸಿ, ಉಗ್ರ ರಶೀದ್ ಅಬ್ದುಲ್ಲಾ ಒಂದು ತಿಂಗಳ ಹಿಂದೆಯೇ ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಬಾಂಬ್ ದಾಳಿಯಿಂದ ಸತ್ತಿದ್ದಾನೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಈತನೊಂದಿಗೆ ಮೂವರು ಸೋದರರು, ಇಬ್ಬರು ಮಹಿಳೆಯರು ಹಾಗೂ ನಾಲ್ವರು ಮಕ್ಕಳೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಬ್ದುಲ್ಲಾ ಸಾವನ್ನಪ್ಪಿರುವ ಬಗ್ಗೆ ಗುಪ್ತಚರ ಇಲಾಖೆಗಳು ದೃಢೀಕರಿಸಿಲ್ಲ. ಗಲ್ಫ್ ದೇಶದಲ್ಲಿರುವ ಈತನ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದು, ಅವರ ಪ್ರತಿಕ್ರಿಯೆಯ ನಂತರವೇ ಸ್ಪಷ್ಟವಾಗಲಿದೆ.
ಕಾಸರಗೋಡಿನವನಾದ ಈತನ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಖಾತೆ ಕಳೆದ ಎರಡು ತಿಂಗಳಿನಿಂದಲೂ ಮೌನವಾಗಿತ್ತು. ಯಾವುದೇ ಸಂದೇಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ಐಸಿಸ್ ಉಗ್ರರನ್ನು ಸಂಪರ್ಕಿಸಿದಾಗ ಆತ ಅಫ್ಘಾನಿಸ್ತಾನದ ಖೋರಾಸನ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಬಂದಿದ್ದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಆದರೆ ಅಮೆರಿಕದ ಪಡೆಗಳು ರಶೀದ್‌ನನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿರಲಿಲ್ಲ. ಬದಲಿಗೆ ಒಟ್ಟಾರೆ ನಡೆದ ದಾಳಿಯ ವೇಳೆ ಎರಡು ಕುಟುಂಬಗಳು ಸಾವನ್ನಪ್ಪಿವೆ ಎಂಬುದು ತಿಳಿದುಬಂದಿದೆ.
ಎಂಜಿನಿಯರಿಂಗ್ ಪದವೀಧರ: 2016 ಮೇಯಲ್ಲಿ ಈತ 21 ಜನರನ್ನು ಯುಎಇ ಹಾಗೂ ಟೆಹ್ರಾನ್ ಮೂಲಕ ಅಫ್ಘಾನಿಸ್ತಾನಕ್ಕೆ ಕರೆದೊಯ್ದಿದ್ದ. ಬೆಂಗಳೂರಿನಲ್ಲಿ ಎಂಬಿಎ ಓದಿದ್ದ ಹಾಗೂ ಕ್ರೈಸ್ತ ಧರ್ಮದಿಂದ ಮತಾಂತರಗೊಂಡಿದ್ದ ಈತನ ಪತ್ನಿ ಆಯೆಶಾ ಕೂಡ ಈತನೊಂದಿಗೆ ಇದ್ದಳು. ಪೀಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕನಾಗಿದ್ದ ಅಬ್ದುಲ್ಲಾ, 2014ರ ವೇಳೆಗೆ ಐಸಿಸ್ ಸಿದ್ಧಾಂತಕ್ಕೆ ಮರುಳಾಗಿದ್ದ. ಈತ ಇಂಜಿನಿಯರಿಂಗ್ ಪದವೀಧರನಾಗಿದ್ದು, ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್ನಲ್ಲಿ ಅದರ್‌ಕಾಗ್ನಿಟಿವ್ ವಿಭಾಗದ ಮುಖ್ಯಸ್ಥನಾಗಿದ್ದ.
ಈತ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿರುವುದು ತಿಳಿದು ಬರುತ್ತಿದ್ದಂತೆಯೇ ಪೀಸ್ ಇಂಟರ್‌ನ್ಯಾಷನಲ್ ಸಂಸ್ಥೆಯನ್ನು ಮುಚ್ಚಲಾಗಿದೆ. ಕೇರಳ ಸರ್ಕಾರ ಈ ಸಂಬಂಧ ಕಳೆದ ವರ್ಷವೇ ಆದೇಶಿಸಿ, ಪೀಸ್ ಇಂಟರ್‌ನ್ಯಾಷನಲ್ನ ಎಲ್ಲ ಶಾಲೆಗಳಿಗೂ ಬೀಗ ಜಡಿಯಲಾಗಿದೆ. ಸಂಸ್ಥೆಯ ಮುಖ್ಯಸ್ಥ ಹಾಗೂ ಸಲಫಿ ಧರ್ಮಬೋಧಕ ಎಂ.ಎಂ.ಅಕ್ಬರ್ ವಿರುದ್ಧ ದೂರು ದಾಖಲಾದಾಗ, ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಂಡು ಈತ ಆಸ್ಟ್ರೇಲಿಯಾದಿಂದ ಕತಾರ್‌ಗೆ ತೆರಳುವ ವೇಳೆ ಹೈದರಾಬಾದ್‌ನಲ್ಲಿ ವಿಮಾನ ಇಳಿದಾಗ ಬಂಧಿಸಲಾಗಿದೆ.
ಟೆಲಿಗ್ರಾಂ ಈತನ ಸಾಧನ
ಅಫ್ಘಾನಿಸ್ತಾನಕ್ಕೆ ತೆರಳಿದ ನಂತರ ರಶೀದ್ ಅಲ್ಲಿಂದಲೇ ಟೆಲಿಗ್ರಾಮ್ ಮೂಲಕ ಸಕ್ರಿಯನಾಗಿದ್ದ ಈತ ಐಸಿಸ್‌ಗೆ ಇನ್ನಷ್ಟು ಜನರನ್ನು ಸೆಳೆಯಲು ಆಡಿಯೋ ಸಂದೇಶ ಕಳುಹಿಸುತ್ತಿದ್ದ. ಟೆಲಿಗ್ರಾಮ್ ಆ್ಯಪ್‌ನ ವಿವಿಧ ಖಾತೆಗಳ ಮೂಲಕ 90 ಕ್ಕೂ ಹೆಚ್ಚು ಆಡಿಯೋ ಸಂದೇಶಗಳನ್ನು ಈತ ಕಳುಹಿಸಿದ್ದಾನೆ. ಕಳೆದ ಏಪ್ರಿಲ್ನಲ್ಲಿ ಕೇರಳದಲ್ಲಿ ರಿಯಾಜ್ ಅಬೂಬಕ್ಕರ್ ಎಂಬಾತನನ್ನು ಎನ್‌ಐಎ ಬಂಧಿಸಿ ವಿಚಾರಣೆ ನಡೆಸಿದ್ದಾಗ, ರಶೀದ್ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸುತ್ತಿರುವುದು ಖಚಿತವಾಗಿತ್ತು. ಕಲ್ಲಿಕೋಟೆಯ ಇಂಜಿನಿಯರಿಂಗ್ ಪದವೀಧರ ಶಜೀರ್ ಮಂಗಲಶೆÏೕರಿ ಅಬ್ದುಲ್ಲಾ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದ ನಂತರ, ರಶೀದ್ ಕೇರಳದ ಐಸಿಸ್ ವಿಭಾಗದ ನಾಯಕತ್ವ ವಹಿಸಿಕೊಂಡಿದ್ದ.