ಜೆರುಸಲೇಂ: ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು ನಾಶಮಾಡುವುದಾಗಿ ಪಣತೊಟ್ಟಿರುವ ಇಸ್ರೇಲ್ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಇದರ ಪರಿಣಾಮ ಗಾಜಾದ ಜಬಾಲಿಯಾ ಪ್ರದೇಶದಲ್ಲಿದ್ದ ಹಮಾಸ್ ನ ಹಿರಿಯ ಕಮಾಂಡರ್ ಅಬ್ದುಲ್ ರಹಮಾನ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:JP Nadda ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ
ಯಾರೀತ ಅಬ್ದುಲ್ ರಹಮಾನ್?
ಅಬ್ದುಲ್ ರಹಮಾನ್ ಹಮಾಸ್ ನ ನೌಕಾಪಡೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈತ ಪ್ರಮುಖ ಕಮಾಂಡರ್ ಗಳಲ್ಲಿ ಒಬ್ಬನಾಗಿದ್ದಾನೆ. ಅಬ್ದುಲ್ ಹಮಾಸ್ ಗೆ ಕೇಂದ್ರ ವ್ಯಕ್ತಿಯಾಗಿದ್ದಾನೆ. ಅಷ್ಟೇ ಅಲ್ಲ ಭಯೋತ್ಪಾದಕ ಚಟುವಟಿಕೆಗಳಿಗೆ ಈತನ ಅಂತಿಮ ಆದೇಶಕ್ಕಾಗಿ ಉಗ್ರ ಸಂಘಟನೆ ಕಾಯುತ್ತಿರುತ್ತದೆ ಎಂದು ವರದಿ ತಿಳಿಸಿದೆ.
ಅಬ್ದುಲ್ ರಹಮಾನ್ ಮೃತಪಟ್ಟಿರುವುದರಿಂದ ಹಮಾಸ್ ಹೋರಾಟಕ್ಕೆ ಹಿನ್ನಡೆಯಾಗಿದಂತಾಗಿದೆ. ಈತನ ಆದೇಶದ ಮೇರೆಗೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ ಸಾವಿರಕ್ಕೂ ಅಧಿಕ ನಾಗರಿಕರ ಹತ್ಯೆಗೆ ಕಾರಣನಾಗಿದ್ದಾನೆ ಎಂದು ವರದಿ ವಿವರಿಸಿದೆ.
ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಡೈಫ್ ನ ನಿವಾಸದ ಮೇಲೆ ಬುಧವಾರ ಇಸ್ರೇಲ್ ಪಡೆಯ ವೈಮಾನಿಕ ಬಾಂಬ್ ದಾಳಿಯಲ್ಲಿ ನೆಲಸಮವಾಗಿರುವುದಾಗಿ ವರದಿ ಹೇಳಿದೆ. ಈ ದಾಳಿಯಲ್ಲಿ ಮೊಹಮ್ಮದ್ ಡೈಫ್ ನ ಸಂಬಂಧಿಕರು ಹಾಗೂ ಕುಟುಂಬದ ಸದಸ್ಯರು ಗಾಯಗೊಂಡಿರಬಹುದು ಇಲ್ಲವೇ ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಿಂದಾಇ ಸಾವನ್ನಪ್ಪಿರುವವರ ಸಂಖ್ಯೆ 2,500ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ ಕಳೆದ ಆರು ದಿನಗಳಿಂದ ಮುಂದುವರಿದಿರುವ ಯುದ್ಧದಿಂದಾಗಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಸ್ರೇಲ್ ಒಡೆತನದ ಟಿವಿ ವರದಿಯ ಪ್ರಕಾರ, ಹಮಾಸ್ ಉಗ್ರರ ಪೈಶಾಚಿಕ ದಾಳಿಯಲ್ಲಿ 1,300ಕ್ಕೂ ಅಧಿಕ ಇಸ್ರೇಲ್ ನಾಗರಿಕರು ಮೃತಪಟ್ಟಿರುವುದಾಗಿ ತಿಳಿಸಿದೆ. ಅಂದಾಜು 3,268 ಜನರು ಗಾಯಗೊಂಡಿದ್ದು, 443 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್ ಪ್ರತೀಕಾರ:
ಹಮಾಸ್ ಬಂಡುಕೋರರ ದಾಳಿಗೆ ರೊಚ್ಚಿಗೆದ್ದಿರುವ ಇಸ್ರೇಲ್ ಪ್ರತೀಕಾರದ ಪಣತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ನಡೆಸಿದ ವೈಮಾನಿ ದಾಳಿಯಲ್ಲಿ ಸುಮಾರು 1,203 ಪ್ಯಾಲೆಸ್ತೇನಿಯರು ಮೃತಪಟ್ಟಿದ್ದು, 5 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.