ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಛಾಪಾಕಾಗದ ಹಗರಣದ ಅಪರಾಧಿ ಅಬ್ದುಲ್ ಕರೀಂಲಾಲ್ ತೆಲಗಿ ಆರೋಗ್ಯ ಕೋಮಾ ಸ್ಥಿತಿ ತಲುಪಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆದುಳು ಜ್ವರ, ಎಚ್‌ಐವಿ ಸೇರಿ ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿರುವ ಕರೀಂಲಾಲ್ ತೆಲಗಿ ಕಳೆದ 10 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆ ಕಂಡು ಬಂದಿಲ್ಲ. ಆಸ್ಪತ್ರೆಗೆ ದಾಖಲಾದ ದಿನದಿಂದಲೂ ತೆಲಗಿ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ದಿನೇದಿನೆ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ತೆಲಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಅಳಿಯ ಇರ್ಫಾನ್ ತಾಳಿಕೋಟೆ ಮತ್ತು ಮಗಳು ಆಸ್ಪತ್ರೆಯಲ್ಲಿದ್ದು ತೆಲಗಿಯ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿಕ್ಟೋರಿಯಾ ಆಸ್ಪತ್ರೆ ಹೊರ ವಿಭಾಗದ ಪೊಲೀಸರು ತೆಲಗಿ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ಭೇಟಿ ನೀಡಿ ವೈದ್ಯರ ಜತೆ ಆರೋಗ್ಯ ವಿಚಾರಿಸಿದ್ದಾರೆ. ಈ ಮಾಹಿತಿಯನ್ನು ಪರಪ್ಪನ ಅಗ್ರಹಾರ ಕಾರಾಗೃಹ ಅಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.
ಕಾನೂನು ಪ್ರಕ್ರಿಯೆಗಳಿಗೆ ಸಿದ್ಧತೆ: ಕರೀಂಲಾಲ್ ತೆಲಗಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಹಿರಿಯ ಅಧಿಕಾರಿಗಳ ಜತೆ ಜೈಲಿನ ಅಧೀಕ್ಷಕರು ಚರ್ಚೆಸಿದ್ದಾರೆಂದು ತಿಳಿದು ಬಂದಿದೆ. ಈ ಮಧ್ಯೆ ಕರೀಂಲಾಲ್ ತೆಲಗಿ ಆರೋಗ್ಯ ಕುರಿತು ಹರಡಿದ್ದ ವದಂತಿ ಕುರಿತು ಸ್ಪಷ್ಟನೆ ನೀಡಿರುವ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಎಚ್ ಐವಿ ಸೇರಿ ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿರುವ ಕರೀಂಲಾಲ್ ತೆಲಗಿ ಜೀವಂತವಾಗಿದ್ದು
ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ.