ಬೆಳಗಾವಿ/ಖಾನಾಪುರ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತದೇಹದ ಎದುರೇ ಆತನ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದು, ಗೊಂದಲದ ಮಧ್ಯೆಯೇ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪಟ್ಟಣಕ್ಕೆ ತೆಲಗಿ ಮೃತದೇಹ ಆಗಮಿಸುತ್ತಿದ್ದಂತೆ ತೆಲಗಿ ಮಗಳು ಸನಾ ಹಾಗೂ ಅಳಿಯ ಇರ್ಫಾನ್ ತಾಳಿಕೋಟೆ ಸೇರಿ ತೆಲಗಿ ಸಹೋದರ ಅಜಿಂ ತೆಲಗಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಾರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ನಂತರ ಜಮಾತ್‌ನವರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಹಾರ ಗಲ್ಲಿಯ ಕಬರ್‌ಸ್ತಾನ(ಸ್ಮಶಾನ)ದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಎರಡನೇ ಬಾರಿ ಜಗಳ: ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ತೆಲಗಿ ಮೃತದೇಹವನ್ನು ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಪತ್ನಿ ರಿಯಾನಾ, ಪುತ್ರಿ ಸನಾ ಹಾಗೂ ಅಳಿಯ ಇರ್ಫಾನ್ ತಾಳಿಕೋಟಿ ಖಾನಾಪುರಕ್ಕೆ ತಂದರು. ನೇರವಾಗಿ ವಿದ್ಯಾನಗರದಲ್ಲಿರುವ ನಿವಾಸಕ್ಕೆ ಬಂದ ನಂತರ ಈ ಮುಂಚೆ ಆರಂಭವಾಗಿ ಜಮಾತ್ ಮಧ್ಯಪ್ರವೇಶದಿಂದ ತಣ್ಣಗಾಗಿದ್ದ ಜಗಳ ತೆಲಗಿ ಸಹೋದರ ಅಜಿಂ ಮೃತದೇಹದ ದರ್ಶನಕ್ಕೆ ಬರುತ್ತಿದ್ದಂತೆ ಮತ್ತೆ ಶುರುವಾಯಿತು.
ಪುತ್ರಿ ಸನಾ ಚಿಕ್ಕಪ್ಪ ಅಬ್ದುಲ್ ಅಜೀಂನೊಂದಿಗೆ ಬಹಿರಂಗವಾಗಿಯೇ ಜಗಳ ಆರಂಭಿಸಿ “ನನ್ನ ತಂದೆ ಜೀವಂತ ಇರುವಾಗ ಯಾರೂ ನೋಡಲು ಬರಲಿಲ್ಲ. ಈಗ ಬಂದು ಕಣ್ಣೀರು ಸುರಿಸುತ್ತಿದ್ದೀರಾ? ನೀವು ಯಾರೂ ಬರುವುದು ಬೇಡ. ಅಂತ್ಯಸಂಸ್ಕಾರ ನಾವೇ ಮಾಡಿಕೊಳ್ಳುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದಳು.
“ನಾನು ಆಸ್ಪತ್ರೆಗೆ ಬಂದರೂ ಭೇಟಿಯಾಗಲು ಒಳಗೆ ಬಿಡಲಿಲ್ಲ. ಈಗ ಶವದ ಎದುರು ಜಗಳ ತೆಗೆಯುತ್ತಿರಲ್ಲ, ನಿಮಗೆ ಮಾನ-ಮರ್ಯಾದೆ ಇದೆಯಾ, ನನ್ನ ಅಣ್ಣನ ಅಂತ್ಯಸಂಸ್ಕಾರ ಮಾಡೋದು ನಮಗೆ ಗೊತ್ತು’ ಎಂದು ಸೋದರ ಅಜೀಂ ಉತ್ತರಿಸಿದರು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿತು. ಅಳಿಯ ಇರ್ಫಾನನೊಂದಿಗೆ ಅಜಿಂನ ಮಕ್ಕಳು ವಾಗ್ವಾದ ನಡೆಸಿದರು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ ಶಾಂತಗೊಳಿಸಬೇಕಾಯಿತು.
ಇದೇ ವೇಳೆ ಜಮಾತ್‌ನ ಮುಖಂಡರನ್ನು ಕೂಡ ತೆಲಗಿ ಮಗಳು ತರಾಟೆಗೆ ತೆಗೆದುಕೊಂಡು ಅಂತ್ಯಸಂಸ್ಕಾರಕ್ಕೆ ನೀವು ಬರುವುದು ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದಳು. ಇದರಿಂದ ಬೇಸರಗೊಂಡ ಮುತವಲ್ಲಿಗಳು ಬೇಡವಾದರೆ ನಾವು ಹೋಗುತ್ತೇವೆ ಎಂದು ಹೊರ ಹೋದರು.
ನಂತರ ಸಂಬಂಧಿಕರು ಅವರ ಕ್ಷಮೆ ಕೋರಿ ಸಮಾಧಾನಪಡಿಸಿದರು. ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು
– ಬೈರೋಬಾ ಕಾಂಬಳೆ/ತಿಮ್ಮಪ್ಪ ಗಿರಿಯಪ್ಪನವರ