Advertisement

ಡ್ರಾಪ್‌ ನೆಪದಲ್ಲಿ ಅಪಹರಣ, ತಪ್ಪಿಸಿಕೊಂಡ ಉದ್ಯೋಗಿ

12:21 PM Mar 26, 2019 | Team Udayavani |

ಬೆಂಗಳೂರು: ಕಾರಿನಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಯನ್ನು ಅಪಹರಿಸಿದ ದುಷ್ಕರ್ಮಿಗಳು, ಪಿಸ್ತೂಲ್‌ ಹಾಗೂ ಚಾಕು ತೋರಿಸಿ ಆತನ ಬಳಿಯಿದ್ದ ಚಿನ್ನಾಭರಣ ಮೊಬೈಲ್‌ ದೋಚಿ ಪರಾರಿಯಾಗಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಾ. 23ರಂದು ರಾತ್ರಿ ಘಟನೆ ನಡೆದಿದ್ದು, ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿಯು ದುಷ್ಕರ್ಮಿಗಳು ಡೀಸೆಲ್‌ ಹಾಕಿಸಲು ಪೆಟ್ರೋಲ್‌ ಬಂಕ್‌ ಬಳಿ ಬಂದಾಗ ಎಚ್ಚೆತ್ತುಕೊಂಡು ಕಾರು ಚಾಲಕನನ್ನು ಕಾಲಿನಿಂದ ಒದ್ದು ಕಾರಿನಿಂದ ಹೊರಬಂದು ತಪ್ಪಿಸಿಕೊಂಡಿದ್ದಾರೆ.

ಈ ಕುರಿತು ರೇಗನ್‌ ಡ್ನೂಕ್‌ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಫ‌ೂಟೇಜ್‌ಗಳನ್ನು ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯೂಟೀವ್‌ ಆಗಿರುವ ರೇಗನ್‌ ಕಾರ್ಯನಿಮಿತ್ತ ಕೇರಳದ ಕ್ಯಾಲಿಕಟ್‌ಗೆ ತೆರಳಿ ಮಾ. 23ರಂದು ರಾತ್ರಿ ಮೈಸೂರಿನಿಂದ ಬಸ್‌ ಪ್ರಯಾಣದಲ್ಲಿ ಆಗಮಿಸಿದ್ದು, ರಾತ್ರಿ 12.30ರ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಇಳಿದುಕೊಂಡಿದ್ದರು.

ಜೆ.ಪಿನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಲು ಕಾರ್‌ ಬುಕ್‌ ಮಾಡಲು ರೇಗನ್‌ ರಸ್ತೆಬದಿ ನಿಂತುಕೊಂಡಿದ್ದರು. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಬನಶಂಕರಿ ಕಡೆ ಬರ್ತೀರಾ ಎಂದು ಕೇಳಿದ್ದಾರೆ. ಕಾರಿನಲ್ಲಿ ಚಾಲಕನ ಪಕ್ಕದಲ್ಲಿ ಒಬ್ಬ ಹಾಗೂ ಹಿಂಬದಿಯ ಸೀಟಿನಲ್ಲಿ ಇಬ್ಬರು ಕುಳಿತುಕೊಂಡಿದ್ದರು. ಅವರನ್ನು ಕೂಡ ಪ್ರಯಾಣಿಕರು ಎಂದು ಭಾವಿಸಿದ ರೇಗನ್‌ ಕಾರು ಹತ್ತಿದ್ದು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ.

Advertisement

ಬನಶಂಕರಿ ಮಾರ್ಗಕ್ಕೆ ತೆರಳುತ್ತಿದ್ದ ಕಾರಿನ ಚಾಲಕ ಹೊರವರ್ತುಲ ರಸ್ತೆಯಲ್ಲಿ ಮೈಸೂರು ರಸ್ತೆಗೆ ತಿರುಗಿಸಿದ್ದಾನೆ. ಸ್ವಲ್ಪ ದೂರ ಹೋದ ಕೂಡಲೇ ಚಾಲಕನ ಸಮೀಪ ಕುಳಿತಿದ್ದ ವ್ಯಕ್ತಿ, ಸೀಟನ್ನು ಹಿಂದಕ್ಕೆ ನೂಕಿ ರೇಗನ್‌ ಕಾಲುಗಳು ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾನೆ.

ಕೂಡಲೇ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಚಾಕು ತೋರಿಸಿ ಚಿನ್ನಾಭರಣ ನೀಡುವಂತೆ ಬೆದರಿಸಿದ್ದಾರೆ. ದುಷ್ಕರ್ಮಿಗಳಿಗೆ ಹೆದರಿದ ರೇಗನ್‌ ಸುಮಾರು 45 ಸಾವಿರ ರೂ. ಮೌಲ್ಯದ ಚಿನ್ನದ ಸರ, 55 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, ದುಬಾರಿ ಮೌಲ್ಯದ ವಾಚ್‌ ಕೊಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರ ಬ್ಯಾಗ್‌ನಲ್ಲಿದ್ದ ಕ್ರೆಡಿಟ್‌ ಕಾರ್ಡ್‌ ಡೆಬಿಟ್‌ ಕಾರ್ಡ್‌ ಕಿತ್ತುಕೊಂಡಿದ್ದಾರೆ.

ಇದಾದ ಕೆಲವೇ ಹೊತ್ತಿನಲ್ಲಿ ಆರೋಪಿಗಳು ಕೆಂಗೇರಿಯಿಂದ ಸ್ವಲ್ಪ ದೂರದ ಪೆಟ್ರೋಲ್‌ ಬಂಕ್‌ಗೆ ಡೀಸೆಲ್‌ ಹಾಕಿಸಲು ಕಾರು ನಿಲ್ಲಿಸಿದ್ದು, ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದವನು ಹೊರಗೆ ಇಳಿದಿದ್ದಾನೆ. ಕೂಡಲೇ ರೇಗನ್‌ ಸಹಾಯಕ್ಕೆ ಕಿರುಚಿಕೊಳ್ಳಲು ಯತ್ನಿಸುತ್ತಿದ್ದಂತೆ ಪುನ: ಆತ ಓಡಿಬಂದು ಕಾರಿನಲ್ಲಿ ಕುಳಿತುಕೊಂಡಿದ್ದಾನೆ.

ಚಾಲಕ ಕಾರು ಸ್ಟಾರ್ಟ್‌ ಮಾಡಿ ಹೋಗಲು ಆರಂಭಿಸುತ್ತಿದ್ದಂತೆ ರೇಗನ್‌ ಕಾಲಿನಿಂದ ಚಾಲಕನಿಗೆ ಒದ್ದಿದ್ದು, ಕೂಡಲೇ ಹೊರಗೆ ಜಿಗಿದಿದ್ದಾರೆ. ಪೆಟ್ರೋಲ್‌ ಬಂಕ್‌ನಲ್ಲಿರುವ ಯುವಕರು ಅವರ ಸಹಾಯಕ್ಕೆ ಧಾವಿಸಿ ರಕ್ಷಿಸಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ರೇಗನ್‌ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೆಟ್ರೋಲ್‌ ಬಂಕ್‌ನಲ್ಲಿ ಕೆಲಕಾಲ ರಕ್ಷಣೆ ಪಡೆದ ರೇಗನ್‌ ತಂದೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ಅವರ ಸಹೋದರ ಬಂದು ಮನೆಗೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next