Advertisement
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲ ಕಾರ್ಯಕ್ರಮದಲ್ಲಿ ಭಕ್ತರಿಗೆ “ವಿಷವಿಕ್ಕಿ’ ಜೈಲು ಸೇರಿರುವ ಇಮ್ಮಡಿ ಮಹದೇವ ಸ್ವಾಮಿ ಅಲ್ಲಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾನೆ. ಇದರಲ್ಲಿ ತಾತ್ಕಾಲಿಕವಾಗಿ ಯಶು ಕಂಡಿದ್ದಾನೆ. ಅಲ್ಲದೇ ಮಠದಲ್ಲಿ ತನ್ನದೇ ಆದ ಬೆಂಬಲಿಗರಿಂದ ತನ್ನ ಪರ ವಾದಿಸುವಂತೆ ಪ್ರೇರೇಪಿಸುತ್ತಿದ್ದಾನೆ.
Related Articles
Advertisement
ಕೋರ್ಟ್ ಮೊರೆ: ಇತ್ತ ಸಾಲೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದಿದ್ದ ಇಮ್ಮಡಿ ಮಹದೇವಸ್ವಾಮಿ ಕಳೆದ 4 ದಿನಗಳ ಹಿಂದೆಯೇ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಸುಳ್ವಾಡಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು ನನ್ನ ವಿರುದ್ಧ ಆರೋಪ ಇನ್ನೂ ಸಾಬೀತಾಗಿಲ್ಲ. ಆದರೆ, ಈಗಾಗಲೇ ಉತ್ತರಾಧಿಕಾರಿ ನೇಮಕ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಉತ್ತರಾಧಿಕಾರಿ ನೇಮಕ ಮಾಡಬಾರದು ಎಂದು ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದ್ದನು.
ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೊಳ್ಳೇಗಾಲದ ಎಸಿಜೆ ನ್ಯಾಯಾಲಯ ಆ.28ರಂದು ಉತ್ತರಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಒಟ್ಟಾರೆ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳ ಆರೋಗ್ಯ ಏರುಪೇರಿನಿಂದಾಗಿ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇತ್ತ ಇಮ್ಮಡಿ ಮಹದೇವಸ್ವಾಮಿ ನ್ಯಾಯಾಲಯ ಮೊರೆಹೋಗಿ ತಡೆಯಾಜ್ಞೆ ಪಡೆದಿರುವುದರಿಂದ ಮುಂದೆ ಏನೆಲ್ಲಾ ಬೆಳವಣಿಗೆಗಳು ಜರುಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಏನಿದು ಸುಳ್ವಾಡಿ ವಿಷಪ್ರಸಾದ ಪ್ರಕರಣ?: ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ 2018ರ ಡಿ.14 ರಂದು ನಡೆದ ಪೂಜಾ ಕಾರ್ಯಕ್ರಮದಲ್ಲಿ ಕ್ರಿಮಿನಾಶಕ ಹಾಕಿದ್ದ ಆಹಾರವನ್ನು ಸೇವಿಸಿದ್ದ 17 ಜನ ಸಾವನ್ನಪ್ಪಿದ್ದರು. 125 ಮಂದಿ ವಿವಿಧ ಆಸ್ಪತ್ರೆಗಳ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಈ ಪ್ರಕರಣದಲ್ಲಿ ಇಮ್ಮಡಿ ಮಹದೇವ ಸ್ವಾಮಿ ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ಪ್ರಸಾದಕ್ಕೆ ವಿಷ ಬೆರೆಸಿದ್ದನು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಜೈಲಿನಲ್ಲಿರುವ ಈ ಸ್ವಾಮಿಯನ್ನು ನಂಬರ್ ಒನ್ ಆರೋಪಿಯನ್ನಾಗಿ ಮಾಡಲಾಗಿದೆ. ಈ ವಿಷಪ್ರಸಾದ ದುರಂತವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೇ ರಾಜ್ಯದಲ್ಲಿ ಪ್ರಸಾದ ವಿತರಣೆಗೆ ಕಣ್ಗಾವಲು ಇಡುವಂತೆ ಕಾನೂನು ರೂಪಿಸಲೂ ಕಾರಣವಾಗಿತ್ತು.
ಸಾಲೂರು ಮಠ ಇತಿಹಾಸವುಳ್ಳ ಮಠವಾಗಿದ್ದು ತನ್ನದೇ ಆದ ಸಂಪ್ರದಾಯ ಹೊಂದಿದೆ. ಈ ನಿಟ್ಟಿನಲ್ಲಿ ಮಠದ ಅಭಿವೃದ್ಧಿಗಾಗಿ ಉತ್ತಮ ವಿದ್ಯಾಭ್ಯಾಸ, ಪಾಂಡಿತ್ಯ ಹೊಂದಿರುವ ಉತ್ತಮ ಚಾರಿತ್ರ್ಯವುಳ್ಳವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿ. ವೀರಶೈವ ಮಹಾಸಭಾ ಜಿಲ್ಲಾ ಘಟಕ ಎಲ್ಲಾ ರೀತಿಯಲ್ಲಿಯೂ ಮಠಕ್ಕೆ ಸಹಕಾರ ನೀಡಲಿದೆ.-ಕೊಡಸೋಗೆ ಶಿವಬಸಪ್ಪ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹದೇಶ್ವರರ ಪೂಜಾ ಕೈಂಕರ್ಯಗಳಿಗೆ ಆಚಾರ ವಿಚಾರ ಕಟ್ಟುಪಾಡುಗಳಿವೆ. ಮಹದೇಶ್ವರನನ್ನು ಪೂಜಿಸುವವರು, ನೈವೇದ್ಯ ಸಲ್ಲಿಸುವವರು ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮ ಧರ್ಮ. ಚಪ್ಪಲಿಯಲ್ಲಿ ಹೊಡೆಸಿಕೊಂಡವರು, ಜೈಲಿಗೆ ಹೋಗಿ ಬಂದವರು ಮಠಕ್ಕೆ ಅನರ್ಹರಾಗಿರುತ್ತಾರೆ.
-ಮಾದಯ್ಯ ತಂಬಡಿ, ಬೇಡಗಂಪಣ ಮುಖ್ಯಸ್ಥ * ವಿನೋದ್ ಎನ್.ಹನೂರು