ಹುಬ್ಬಳ್ಳಿ: ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ನಿಟ್ಟಿನಲ್ಲಿ ಎಲ್ಲ ಮಠಾಧೀಶರಿಂದ ಏಕಧ್ವನಿ ಮೊಳಗುವಂತಾಗಲು ಯತ್ನಿಸುವುದಾಗಿ ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಸಾರ ಹಾಗೂ ಮಹತ್ವ ಮಕ್ಕಳಿಗೆ ಮನನವಾಗಬೇಕಾದರೆ ಅದು ಪಠ್ಯಕ್ಕೆ ಸೇರ್ಪಡೆಗೊಳ್ಳುವುದು ಅವಶ್ಯ. ಸರಕಾರದ ಮೇಲೆ ಒತ್ತಡ ತರುವ ನಿಟ್ಟನಲ್ಲಿ ಎಲ್ಲ ಮಠಾಧೀಶರು ಒಂದೇ ಧ್ವನಿಯಲ್ಲಿ ಒತ್ತಾಯಿಸುವ ಅಗತ್ಯ ಇದೆ. ಪರ್ಯಾಯ ಕಾರ್ಯಕ್ರಮ ಮುಗಿದ ಬಳಿಕ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಭಗವದ್ಗೀತೆಯಲ್ಲಿ ಯಾವುದೇ ಮತೀಯ ಅಂಶಗಳು ಇಲ್ಲ. ಜ್ಞಾನ, ಜೀವನ ಮೌಲ್ಯಗಳು ಇವೆ. ಸೌದಿ ಅರೇಬಿಯಾ, ಲಂಡನ್‌ನಂತಹ ಕಡೆಗಳಲ್ಲಿ ಭಗವದ್ಗೀತೆ ಪಾಠ ಮಾಡಲಾಗುತ್ತಿದೆ. ಭಗವದ್ಗೀತೆ ವಿಚಾರಕ್ಕೆ ಯಾವುದೇ ಮಠಾಧೀಶರ ಅಪಸ್ವರ ಇಲ್ಲ. ಭಗವದ್ಗೀತೆ ಯೋಗಶಾಸ್ತ್ರವಾಗಿದೆ. ಯೋಗವನ್ನು ಹೇಗೆ ವಿಶ್ವದ ಬಹುತೇಕ ರಾಷ್ಟ್ರಗಳು ಒಪ್ಪಿವೆಯೋ ಅದೇ ರೀತಿ ಗೀತೆಯೂ ಒಪ್ಪಿಗೆ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಪರ್ಯಾಯ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಅಮೆರಿಕ, ಆಸ್ಟ್ರೇಲಿಯ ಸಹಿತ 80ಕ್ಕೂ ಹೆಚ್ಚು ವಿದೇಶಿ ನಗರಗಳಿಗೆ ಭೇಟಿ ನೀಡಿ ಗೀತಾ ಪ್ರಚಾರ ಮಾಡಲಾಗಿದೆ. ಆರು ತಿಂಗಳುಗಳಿಂದ ದೇಶದಲ್ಲಿ ಸಂಚಾರ ಕೈಗೊಂಡಿದ್ದು, ಕಳೆದೆರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಸಂಚಾರ ಕೈಗೊಳ್ಳುತ್ತಿರುವೆ. ಜ.8ರಂದು ಉಡುಪಿ ಪುರಪ್ರವೇಶ ಮಾಡುತ್ತಿದ್ದು, ಜ.18ರಂದು ಪರ್ಯಾಯ ಸಂಕಲ್ಪ ಕಾರ್ಯ ಆರಂಭವಾಗುತ್ತದೆ ಎಂದರು.
ತಾವು ಹನ್ನೆರಡೂವರೆ ವರ್ಷ ದಲ್ಲಿಯೇ ಪೀಠಾರೋಹಣ ಮಾಡಿ ಮುಂದಿನ ವರ್ಷ 50 ವರ್ಷವಾಗುತ್ತಿದ್ದು, ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಸುಮಾರು 8 ಅಡಿ ಎತ್ತರದ ಚಿನ್ನದ ರಥ ಮಾಡಿಸಲು ಯೋಜಿಸಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ತಮಗೂ ಆಹ್ವಾನ ಬಂದಿದೆ. ಆದರೆ, ಜ.18ರಿಂದ ಪರ್ಯಾಯ ಕಾರ್ಯಕ್ರಮ ಆರಂಭ ವಾಗುವುದರಿಂದ ಅಯೋಧ್ಯೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ವಿದೇಶಗಳಲ್ಲಿನ ಮುಚ್ಚಿದ ಚರ್ಚ್‌ಗಳನ್ನು ಖರೀದಿಸಿ ಮಂದಿರವಾಗಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಸುಮಾರು 15 ಚರ್ಚ್‌ಗಳನ್ನು ಮಂದಿರಗಳಾಗಿ ಬದಲಾಯಿಸಲಾಗಿದೆ. ಸುಮಾರು 108 ಮಂದಿರಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
– ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ