ಔರಾದ: ಭೀಕರ ಬರದಲ್ಲಿ ತಾಲೂಕಿನ ಜನರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದು, ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬಾರದ ಸ್ಥಿತಿ ಇದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾತ್ರ ಇಂತಹ ಬರದಲ್ಲಿ ಶಾಲೆ ಆರಂಭಿಸಲು ಹೊರಟಿರುವುದು ಮಕ್ಕಳ ಹಿತಕ್ಕೆ ಒಳ್ಳೆಯದಲ್ಲ.
Advertisement
ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಇತಿಹಾಸದಲ್ಲಿಯೇ ಕಂಡರಿಯದ ರೀತಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಿಂದ ತಾಲೂಕು ಆಡಳಿತ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಅದರಂತೆ ಜಿಲ್ಲೆಯ ಇನ್ನುಳಿದ ತಾಲೂಕಿನಲ್ಲಿ ಜಿಲ್ಲಾಡಳಿತ ಟ್ಯಾಂಕರ್ ಮೂಲಕ 92 ಲಕ್ಷ ರೂ. ಮೌಲ್ಯದ ನೀರು ಸರಬರಾಜು ಮಾಡಿದೆ.
Related Articles
Advertisement
ಶಾಲೆಗಳಲ್ಲಿ ನೀರಿಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕಿನಲ್ಲಿ ಶಾಲೆ ಆರಂಭೋತ್ಸವ ಮಾಡಿದೆ. ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬಂದಾಗ ಕನಿಷ್ಠ ಕುಡಿಯಲೂ ನೀರು ಇಲ್ಲದ ಸ್ಥಿತಿ ಶಾಲೆಯಲ್ಲಿ ಇದೆ. ಅಲ್ಲದೆ ಮಧ್ಯಾಹ್ನದ ಬಿಸಿ ಊಟ ತಯ್ನಾರಿಸಲು ಕೂಡ ನೀರು ಇಲ್ಲದಂತಾಗಿದೆ. ಇಂಥ ಸ್ಥಿತಿಯಲ್ಲಿ ನಾವು ಹೇಗೆ ಮಾಡುವುದು ಎನ್ನುವುದು ತಾಲೂಕಿನ ಪ್ರತಿಯೊಂದು ಶಾಲೆಯ ಶಿಕ್ಷಕರ ಮಾತು.
ನೆರೆಯ ತೆಲಂಗಾಣ ಹಾಗೂ ಯಾದಗಿರಿ ಮತ್ತು ಕಲಬುರಗಿ ಜಿಲ್ಲಾಡಳಿತಕ್ಕೆ ಅಲ್ಲಿನ ಮಕ್ಕಳ ಬಗ್ಗೆ ಇರುವ ಕಾಳಜಿ ಬೀದರ ಜಿಲ್ಲಾಡಳಿತಕ್ಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾಕೆ ಇಲ್ಲ ಎಂಬ ಪ್ರಶ್ನೆ ಗಡಿ ತಾಲೂಕಿನ ಪಾಲಕರರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಊರಿನಲ್ಲಿರುವ ಶಾಲೆಗಳಿಗೆ ಹೋಗುತ್ತಾರೆ. ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಯ ಮಕ್ಕಳು ನಿತ್ಯ ವಾಹನದಲ್ಲಿ ಸಂಚರಿಸುವಾಗ ಬಿಸಿಲಿನ ತಾಪದಿಂದ ಅಪಾಯದಲ್ಲಿ ಸಿಲುಕುತ್ತಾರೆ. ಹೀಗಾಗಿ ಔರಾದ ತಾಲೂಕು ಸೇರಿದಂತೆ ಬರ ಇರುವ ತಾಲೂಕಿನಲ್ಲಿ ಶಾಲೆ ಆರಂಭವನ್ನು ಮುಂದಕ್ಕೆ ಹಾಕಬೇಕೆಂದು ನಾಗರಿಕರು ಹಾಗೂ ಪಾಲಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗಳು ಆಲಿಸಿ ಬಗೆ ಹರಿಸುವುದೇ ನಮ್ಮ ಕಾಯಕವಾಗಿದೆ ಎಂದು ಸಣ್ಣ ಪುಟ್ಟ ಸಮಸ್ಯೆಗಳಾದಾಗ ರಸ್ತೆಗೆ ಇಳಿದು ಹೋರಾಟ ಮಾಡುವ ವಿದ್ಯಾರ್ಥಿ ಪರಿಷತ್ ಮುಖಂಡರಿಗೆ ಶಾಲೆ ಆರಂಭ ಹಾಗೂ ಬರ ಕುರಿತು ತಿಳಿದಲ್ಲವೇ ಎನ್ನುವುದು ಜನರ ಮಾತು.
ಮನವಿಗೆ ಬೆಲೆಯಿಲ್ಲ: ಹೈ.ಕ. ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್ ಇರುವ ಕಾರಣ ಪ್ರಸಕ್ತ ಸಾಲಿನಲ್ಲಿ ಶಾಲೆಗಳ ಆರಂಭೋತ್ಸವವನ್ನು ಜೂನ್ 15ರ ವರೆಗೆ ಮುಂದೂಡಬೇಕು. ಸಧ್ಯದ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಯ ಮೇಲಾಧಿಕಾರಿಗಳಿಗೂ ಗೊತ್ತಿದೆ. ಇಂಥ ಬಿಸಿಲಿನಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆದರೂ ಸ್ಪಂದಿಸಿಲ್ಲ. ಅದಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಸುಶೀಲ ನಮೋಸಿ ಅವರು ಕೂಡ ಸರ್ಕಾರಕ್ಕೆ ಪತ್ರ ಬರೆದು ಜೂನ್ 15ರ ತನಕ ಶಾಲೆ ಆರಂಭಿಸದಂತೆ ಮನವಿ ಮಾಡಿದ್ದಾರೆ.
ದಿನದಿಂದ ದಿನಕ್ಕೆ ಬಿಸಿಲಿನ ಕಾವು ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಕೂಡ ಉಲ್ಭಣವಾಗಿದೆ. ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸರ್ಕಾರಕ್ಕೆ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಿದ್ದೆವೆ. ಆದರೂ ಜಿಲ್ಲಾಧಿಕಾರಿಗಳು ಶಾಲೆ ಆರಂಭಿಸುವಂತೆ ಆದೇಶ ಮಾಡಿದ್ದಾರೆ. ಈ ಕುರಿತು ಜಿಲ್ಲಾಕಾರಿಗಳಿಗೆ ಇನ್ನೊಮ್ಮೆ ಮಾತನಾಡುತ್ತೇನೆ.•ಚಂದ್ರಶೇಖರ,
ಡಿಡಿಪಿಐ ಬೀದರ ತಾಲೂಕಿನಲ್ಲಿ ಬೆಂಕಿಯಂತಹ ಬಿಸಿಲಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಆದೇಶದಂತೆ ನಾವಂತೂ ಶಾಲೆ ಆರಂಭಿಸುತ್ತಿದ್ದೇವೆ. ಬಿಸಿಲಿನಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬಿರಿದರೆ ಅದಕ್ಕೆ ಜಿಲ್ಲಾಡಳಿತವೇ ಕಾರಣವಾಗುತ್ತದೆ.
•ಬಸವರಾಜ ಶಟಕಾರ,
ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ