Advertisement

ಕಸಾಪ ಸಂತಪೂರ ವಲಯ ಘಟಕ ಉದ್ಘಾಟನೆ

04:54 PM May 22, 2019 | Team Udayavani |

ಔರಾದ: ಸಂತಪೂರ ಹೋಬಳಿ ಕೇಂದ್ರದಲ್ಲಿ ಮುಂಬರುವ ದಿನಗಳಲ್ಲಿ ಸಂತಪೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸದಾಶಯ ನಮಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.

Advertisement

ಸಂತಪೂರ ಗ್ರಾಮದ ಸರ್ವಜ್ಞ ಪ‌ದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ ಸಂತಪೂರ ವಲಯ ಘಟಕ ಉದ್ಘಾಟನೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್‌ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಡಿ ನಾಡು ಬೀದರ ಜಿಲ್ಲೆಯಲ್ಲಿ ಕನ್ನಡವನ್ನು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಸಂಘಟಿಸುವಲ್ಲಿ ಜಿಲ್ಲಾ ಕಸಾಪ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜಿಲ್ಲೆ ತಾಲೂಕು ಹಾಗೂ ವಲಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಗಡಿಯಲ್ಲಿ ಕನ್ನಡ ವಾತಾವರಣ ನಿರ್ಮಿಸುತ್ತಿದೆ ಎಂದರು.

ಗಡಿ ತಾಲೂಕು ಔರಾದನಲ್ಲಿ ಈ ಹಿಂದೆ ಮಾಡಿದ ಎಲ್ಲ ಸಮ್ಮೇಳನಗಳು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಸಲು ಬಯಸಿದ ಸಾಹಿತ್ಯ ಸಮ್ಮೇಳನ ಕೂಡ ಈ ಹಿಂದಿನಂತೆ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಯುವ ಸಾಹಿತಿ ಮೇನಕಾ ಪಾಟೀಲ ಮಾತನಾಡಿ, ಜಗತ್ತಿಗೆ ಶಾಂತಿಯ ಮಂತ್ರ ಬೋಧಿಸಿದ ಕೀರ್ತಿ ಮಹಾತ್ಮ ಗೌತಮ ಬುದ್ಧ ಅವರಿಗೆ ಸಲ್ಲುತ್ತದೆ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಮೂಲಕ ತನ್ನ ಸಾಂಸಾರಿಕ ಜೀವನ ತ್ಯಾಗ ಮಾಡಿ ಜಗತ್ತಿಗೆ ಬೆಳಕು ಚಲ್ಲಿದರು ಎಂದರು.

Advertisement

ಶಿಕ್ಷಕ ಬೀರಪ್ಪ ಕಡ್ಲಿಮಟ್ಟಿ ಉಪನ್ಯಾಸ ನೀಡಿ, ವೈದಿಕ ವ್ಯವಸ್ಥೆ ಧಿಕ್ಕರಿಸುವ ಮೂಲಕ ಸಮಾನತೆ ಸಮಾಜ ಕಟ್ಟಿದವರು ಬಸವಣ್ಣ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಸ್ತ್ರೀ ಸಮಾನತೆ ನೀಡಿದ ಮಹಾನ್‌ ಚೇತನ ಬಸವಣ್ಣ. ವರ್ಗ, ವರ್ಣ, ಜಾತಿ, ಅಸ್ಪೃಷ್ಯತೆಯ ವಿರುದ್ಧ ಬಂಡಾಯದ ಕಹಳೆ ಊದಿ ಸಮತೆಯ ಸಂಗಮ ಮಾಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಯುವಚಿಂತಕ ನಂದಾದೀಪ ಬೋರಾಳೆ ಮಾತನಾಡಿ, ಬುದ್ಧ ಹಾಗೂ ಬಸವಣ್ಣನವರು ಕಟ್ಟಲು ಬಯಸಿದ ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತಿಗೆ ಮಾದರಿಯಾಗುವ ಸಂವಿಧಾನ ರಚಿಸಿ ಭಾರತ ದದೇಶದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಗೆ ಪೂರಕವಾಗಿ ಬದುಕಿದ್ದಾರೆ ಎಂದರು.

ಆಶಯ ನುಡಿ ಹೇಳಿದ ಸಂತಪೂರ ವಲಯ ಅಧ್ಯಕ್ಷ ಬಾಲಾಜಿ ಕುಂಬಾರ, ಸಂತಪೂರ ವಲಯದಲ್ಲಿ ಕನ್ನಡವನ್ನು ಸಾಹಿತ್ಯಕ, ಸಾಂಸ್ಕೃತಿಕವಾಗಿ ಸಂಘಟಿಸಲು ವಲಯ ಘಟಕ ಶ್ರಮಿಸಲು ಸಿದ್ಧವಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಜಗನ್ನಾಥ ಮೂಲಗೆ, ಸಂತಪೂರಗ್ರಾಮ ಪಂಚಾಯತ್‌ ಅಧ್ಯಕ್ಷೆ ಪದ್ಮಾವತಿ ಕೋಳಿ, ಪ್ರಭುಶೆಟ್ಟಿ ಸೈನಿಕಾರ್‌, ರಾಮಚಂದ್ರ ಬಿರಾದಾರ, ವೀರಶೆಟ್ಟಿಚನ್ನಶೆಟ್ಟಿ, ಖಂಡೋಬಾ ಕಂಗಟೆ, ಚನ್ನಬಸವ ಭೂರೆ, ಅಮೀರಖಾನ್‌, ವಿಶ್ವನಾಥ ವಾಡೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಮೃತರಾವ ಬಿರಾದಾರ ಸ್ವಾಗತಿಸಿದರು. ಚಿರಂಜೀವಿ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ್‌ ಟಂಕಸಾಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next