Advertisement

ತಹಶೀಲ್ದಾರ್‌ ಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ

10:40 AM Jul 13, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಪಟ್ಟಣದಲ್ಲಿ ವಿದ್ಯುತ್‌ ಕಣ್ಣಾ ಮುಚ್ಚಾಲೆ ಆಟದಿಂದ ಪಹಣಿ ಹಾಗೂ ಇನ್ನಿತರ ಕೆಲಸಕ್ಕಾಗಿ ತಹಶೀಲ್ದಾರ್‌ ಕಚೇರಿಗೆ ಬರುವ ರೈತರು, ಸಾರ್ವಜನಿಕರು ಹದಿನೈದು ದಿನಗಳಿಂದ ಸಕಾಲಕ್ಕೆ ಕಾರ್ಯವಾಗದೇ ಸಮಸ್ಯೆ ಎದುರಿಸುವಂತಾಗಿದೆ.

Advertisement

ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ವಿವಿಧ ಕಚೇರಿಗಳಿಗೆ ಫಲಾನುಭವಿಗಳು ತಮ್ಮ ಕೆಲಸಕ್ಕಾಗಿ ಅಲೆಯಬೇಕಾಗಿದೆ. ಪಹಣಿ ಪಡೆಯಲು, ಆಧಾರ್‌ ಕಾರ್ಡ್‌ ನೋಂದಣಿ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೇರಿದಂತೆ ಇನ್ನಿತರ ಸೌಕರ್ಯಗಳಿಗಾಗಿ ಅರ್ಜಿ ಸಲ್ಲಿಸಲು ದಿನವಿಡೀ ವಿದ್ಯುತ್‌ಗಾಗಿ ಕಾದು ಕುಳಿತುಕೊಳ್ಳುವ ಅನಿರ್ವಾಯತೆ ಇದೆ.

ಮಳೆಗಾಲದಲ್ಲಿ ಬಿರುಗಾಳಿ ಬೀಸುವುದು ಹಾಗೂ ಇನ್ನಿತರ ಕಾರಣಗಳಿಂದ ಪಟ್ಟಣದಲ್ಲಿ 15 ದಿನಗಳಿಂದ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ, ಸರ್ಕಾರಿ ಕಚೇರಿಗೆ ಬರುವ ಫಲಾನುಭವಿಗಳು ದಿನವಿಡೀ ಕಾಯಬೇಕಾಗಿದೆ. ಹೆಣ್ಣು ಮಕ್ಕಳು ಹಾಗೂ ವಯೋವೃದ್ಧರು ವಿದ್ಯುತ್‌ ಬರುವವರೆಗೆ ಠಿಕಾಣಿ ಹೂಡಿ ಕುಳಿತುಕೊಳ್ಳಬೇಕಾಗಿದೆ.

ಹೀಗೆ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುರಿಂದ ಯಾವುದೊ ಕೆಲಸಕ್ಕಾಗಿ ಬರುವ ಜನರು ತಮ್ಮ ಕೆಲಸ ಮುಗಿಯದೇ ನಿರಾಶೆಯಿಂದ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದಾರೆ. ಈ ವಿಷಯ ತಿಳಿದರೂ ತಹಶಿಲ್ದಾರ್‌ ಅವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದ್ದೂ ಇಲ್ಲದಾದ ಯಂತ್ರ: ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಜನರಿಗೆ ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶದಿಂದ ಜನರೇಟರ್‌ ನೀಡಲಾಗಿದೆ. ಮೂರು ತಿಂಗಳ ಹಿಂದೆ ಈ ಜನರೇಟರ್‌ ಹಾಳಾಗಿದೆ. ಅದರ ದುರಸ್ತಿಗೂ ತಹಶಿಲ್ದಾರ್‌ ಅವರು ಕ್ರಮ ಕೈಗೊಳ್ಳದಿರುವುದರಿಂದ ವಿದ್ಯುತ್‌ ಪೂರೈಕೆ ಇಲ್ಲದಾಗ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

Advertisement

ಹೊಲದಲ್ಲಿ ಬೆಳೆಗಳು ಬಂದಿವೆ. ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಅಂಥದರಲ್ಲಿ ಬೆಳೆ ವಿಮೆಗಾಗಿ ಪಹಣಿ ಪಡೆದುಕೊಳ್ಳಲು ತಶೀಲ್ದಾರ್‌ ಕಚೇರಿಗೆ ಎರಡು ದಿನಗಳಿಂದ ಅಲೆಯುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಇಂದು ನಾಳೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ಮಮದಾಪೂರ ಗ್ರಾಮದ ರೈತ ಘಾಳರೆಡ್ಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಚೇರಿಯಲ್ಲಿ ಹಾಳಾದ ಜನರೇಟರ್‌ಅನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ಎಂ.ಚಂದ್ರಶೇಖರ ಭರವಸೆ ನೀಡಿದ್ದಾರೆ.

ಸರ್ಕಾರ ಬೃಹತ್‌ ಕಟ್ಟಡ ನಿರ್ಮಾಣ ಮಾಡಿದೆ. ಆದರೆ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಹಶೀಲ್ದಾರ್‌ ಕ್ರಮ ಕೈಗೊಳ್ಳದಿರುವುದರಿಂದ ನಿತ್ಯ ಕಚೇರಿಗೆ ಬರುವ ಸಾರ್ವಜನಿಕರು ವಿದ್ಯುತ್‌ ಸಮಸ್ಯೆಯಿಂದ ತಮ್ಮ ಕೆಲಸ ಪೂರ್ಣಗಳ್ಳದೇ ನಿರಾಶೆಯಿಂದ ತಮ್ಮ ಊರಿಗೆ ಹೋಗುತ್ತಿದ್ದಾರೆ.
ರತಿಕಾಂತ ಸ್ವಾಮಿ, ರೈತರು

ಮಳೆಯಿಂದ ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ನಾಳೆಯಿಂದ ವಿದ್ಯುತ್‌ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ.
ಮಹೇಂದ್ರಕುಮಾರ, ಜೆಸ್ಕಾಂ ಎಇಇ

Advertisement

Udayavani is now on Telegram. Click here to join our channel and stay updated with the latest news.

Next