Advertisement

ಪರವಾನಗಿ ಇಲ್ಲದೇ ಶಾಲಾ ಕಟ್ಟಡ ನಿರ್ಮಾಣ

10:15 AM Jul 01, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಪಟ್ಟಣ ಪಂಚಾಯತದ ನಿಯಮಗಳನ್ನು ಗಾಳಿಗೆ ತೂರಿ ಎರಡು ಅಂತಸ್ತಿನ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ.

Advertisement

ಪಟ್ಟಣದ ಸರ್ವೇ ನಂ 89/9ರಲ್ಲಿ 20ಗುಂಟೆ ಜಮೀನಿನಲ್ಲಿ ನವ ಚೇತನ ಗುರುಕುಲ ಶಾಲೆಯ ಕಟ್ಟಡವನ್ನು ನಿಯಮ ಬಾಹೀರವಾಗಿ ಕಟ್ಟಲಾಗಿದೆ.

ಪಟ್ಟಣದ ಹೊರ ವಲಯದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಪಟ್ಟಣ ಪಂಚಾಯತದಿಂದ ಇಂದಿಗೂ ಪರವಾನಗಿ ಪಡೆದಿಲ್ಲ. ಮತ್ತು ಭೂಮಿಯನ್ನು ಎನ್‌ಎ ಸಹ ಮಾಡಿಲ್ಲ ಎನ್ನುವುದು ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.

ಪಟ್ಟಣ ಪಂಚಾಯತದಿಂದ ಪರವಾನಗಿ ಪಡೆಯದೇ ನಿರ್ಮಿಸಲಾದ ಕಟ್ಟಡಕ್ಕೆ ಅದೇ ಪಟ್ಟಣ ಪಂಚಾಯತದಿಂದ ನೀರಿನ ಪೈಪ್‌ಲೈ ವ್ಯವಸ್ಥೆ ಮಾಡಲಾಗಿದೆ. ಜೆಸ್ಕಾಂನಿಂದ ವಿದ್ಯುತ ಸಂಪರ್ಕ ಸಹ ಕಲ್ಪಿಸಲಾಗಿದೆ. ಎಲ್ಲ ಕಾಗದ ಪತ್ರಗಳು ಇದ್ದರೂ ಸಕಾಲಕ್ಕೆ ನೀರಿನ ಸಂಪರ್ಕ ಕಲ್ಪಿಸಿಕೊಡದಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೂರಾರು ಜನರು ಕಚೇರಿ ಸುತ್ತಲೂ ಅಲೆಯುತ್ತಾರೆ. ಏನೂ ಇಲ್ಲದಿದ್ದರೂ ಈ ಎರಡು ಅಂತಸ್ತಿನ ಕಟ್ಟಡಕ್ಕೆ ಎಲ್ಲ ಸೌಕರ್ಯ ನೀಡಿರುವುದು ಪಟ್ಟಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೇವಲ ನವಚೇತನ ಶಾಲೆಯ ಕಟ್ಟಡ ಮಾತ್ರವಲ್ಲದೇ ಪಟ್ಟಣದಲ್ಲಿ ಪ್ರತಿ ವರ್ಷ ನೂರಾರು ಕಟ್ಟಡಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಆದರೂ ಕೂಡ ಸಂಬಂಧಿಸಿದ ಅಧಿಕಾರಿಗಳು, ಪಟ್ಟಣದ ಜನರಿಗೆ ಹಾಗೂ ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿಗಳಿಗೆ ನಿಯಮ ಕುರಿತು ಅರಿವು ಮೂಡಿಸುತ್ತಿಲ್ಲ. ಇದರಿಂದ ಅಕ್ರಮ ಕಟ್ಟಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

Advertisement

ಪಟ್ಟಣ ಪಂಚಾಯತ ಹಾಗೂ ತಹಶೀಲ್ದಾರ್‌ ನೀಡಿದ ಮಾಹಿತಿ ಹಕ್ಕಿನ ಪ್ರಕಾರ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಇಲಾಖೆಯಿಂದ ಇಂದಿಗೂ ಪರವಾನಗಿ ಪಡೆಲ್ಲ ಎಂದು ಅಧಿಕಾರಿಗಳು ಲಿಖೀತ ರೂಪದಲ್ಲಿ ತಿಳಿಸಿದ್ದು, ಅದು ಕೃಷಿ ಭೂಮಿಯಾಗಿದೆ ಎಂದು ತಿಳಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಉತ್ತಮ ಮಾರ್ಗದರ್ಶನ ನೀಡುವ ಸಂಸ್ಥೆಯೇ ಇಲಾಖೆಯ ನಿಯಮ ಗಾಳಿಗೆ ತೂರಿದ್ದರಿಂದ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ.
ಶಿವಾನಂದ ಸುಲಪಲ್ಲೆ,
ಆರ್‌ಟಿಐ ಕಾರ್ಯಕರ್ತ

ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಂಥ ಕಟ್ಟಡ ನಿರ್ಮಾಣ ಮಾಡಿದ ಸಂಸ್ಥೆಯ ಅಧ್ಯಕ್ಷರೊಂದಿಗೆ ಮಾತನಾಡಿ ವಿಚಾರಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ.
ಸವಿತಾ ರೇಣುಕಾ,
ಪಪಂ ಮುಖ್ಯಾಧಿಕಾರಿ

ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಣ ಸಂಸ್ಥೆಯೇ ಪಟ್ಟಣ ಪಂಚಾಯತ ನಿಮಯ ಮರೆತಿರುವುದು ಸರಿಯಲ್ಲ. ಇಂಥ ಸಂಸ್ಥೆಯ ವಿರುದ್ಧ ಸಬಂಧಪಟ್ಟ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯತ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುತ್ತದೆ.
ಪ್ರಭು ಶಟಕಾರ,
ಕರವೇ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next