Advertisement

ಚೊಂಡಿಮುಖೇಡಕ್ಕೆ ಭೇಟಿ ನೀಡುವರೇ ಸಿಎಂ

11:06 AM Jun 20, 2019 | Naveen |

ಔರಾದ: ಗ್ರಾಮಕ್ಕೆ ವಾಸ್ತವ್ಯ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ದಶಕ ಕಳೆದರೂ ಗ್ರಾಮಕ್ಕೆ ಕಾಲಿಟ್ಟಿಲ್ಲ. ಗಡಿ ತಾಲೂಕಿನ ಕೊನೆ ಗ್ರಾಮಕ್ಕೆ ಮುಖ್ಯಮಂತ್ರಿಗಳು ಬರುವುದು ಯಾವಾಗ? ನಮ್ಮ ಗ್ರಾಮವನ್ನು ಏಕೆ ಕಡೆಗಣಿಸುತ್ತಿದ್ದಾರೆ? ನಾವು ಕನ್ನಡಿಗರಲ್ಲವೇ ಎಂಬ ಪ್ರಶ್ನೆಗಳು ತಾಲೂಕಿನ ಚೊಂಡಿಮುಖೇಡ ಗ್ರಾಮಸ್ಥರಲ್ಲಿ ಸುಳಿದಾಡುತ್ತಿವೆ.

Advertisement

ಈ ಹಿಂದೆೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಔರಾದ ತಾಲೂಕು ಕೊನೆ ಗ್ರಾಮ ಚೊಂಡಿಮುಖೇಡಕ್ಕೆ ಬಂದು ವಾಸ್ತವ್ಯ ಮಾಡುವುದಾಗಿ ಹೇಳಿದ್ದರು. ಹಾಗಾಗಿ ಗ್ರಾಮದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಳಿಕ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಈಗ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮಕ್ಕೆ ಜೂ. 29ರಂದು ಭೇಟಿ ನೀಡಲಿರುವ ಸಿಎಂ ಕುಮಾರಸ್ವಾಮಿ ಅವರು ಔರಾದ ತಾಲೂಕು ಚೊಂಡಿಮುಖೇಡ ಹಾಗೂ ಔರಾದ ತಾಲೂಕಿಗೆ ಆಗಮಿಸಬೇಕು ಎಂಬ ಬೇಡಿಕೆಗಳು ಕೇಳಿ ಬಂದಿವೆ.

ಭೀಕರ ಬರಗಾಲದಿಂದ ತಾಲೂಕಿನ ಜನಜಾನುವಾರುಗಳು ನರಳುತ್ತಿವೆ. ಜಲಮೂಲಗಳು ಸಂಪೂರ್ಣವಾಗಿ ಒಣಗಿವೆ. ನೀರಿಗಾಗಿ ಜನರು ರಸ್ತೆಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇಲ್ಲಿನ ಜನರ ಸ್ಥಿತಿ ಅರಿತುಕೊಳ್ಳಲು ಸಿಎಂ ಬಂದಿಲ್ಲ. ಅದಲ್ಲದೆ ಜಿಲ್ಲೆಯಲ್ಲಿರುವ ಮೂವರು ಸಚಿವರ ಪೈಕಿ ಒಬ್ಬರಾದರೂ ಬರದ ಬಗ್ಗೆ ಚಿಂತನೆ ಸಹ ಮಾಡಿಲ್ಲ.

ಈ ಹಿಂದೆ ಸಿಎಂ ವಾಸ್ತವ್ಯಕ್ಕೆ ಬರುತ್ತಾರೆ ಎನ್ನುವ ಕಾರಣದಿಂದ ಚೊಂಡಿಮುಖೇಡದಲ್ಲಿ ಸಿಸಿ ರಸೆ, ಚರಂಡಿ, ಸಂಚಾರ ಕಲ್ಪಿಸಿಕೊಡುವ ಸೇತುವೆ, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಹಾಗೂ ವಿದ್ಯುತ್‌ ಕಂಬಗಳ ಅಳವಡಿಕೆ ಕೆಲಸಗಳು ಭರದಿಂದ ಸಾಗಿದ್ದವು. ಆದರೆ ಗ್ರಾಮ ವಾಸ್ತವ್ಯ ರದ್ದಾಗಿನಿಂದ ಅಭಿವೃದ್ಧಿ ಕಾಮಗಾರಿಗಳು ತಟಸ್ಥವಾಗಿಯೇ ಉಳಿದುಕೊಂಡಿವೆ.ಚೊಂಡಿಮುಖೇಡ ಗ್ರಾಮಕ್ಕೆ ಮಹಾರಾಷ್ಟ್ರದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಇಲ್ಲಿನ ಜನರ ವ್ಯಾಪಾರ ಮತ್ತು ವ್ಯವಹಾರಗಳು ಮಹಾರಾಷ್ಟ್ರದ ಉದಗೀರ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಸರ್ಕಾರಿ ಕೆಲಸಗಳಿಗೆ ಮಾತ್ರ ತಾಲೂಕು ಕೇಂದ್ರ ಸ್ಥಾನಕ್ಕೆ ಬರುವುದು ಸಾಮಾನ್ಯವಾಗಿದೆ. ಚೊಂಡಿಮುಖೇಡ ಗ್ರಾಮಕ್ಕೆ ನಿತ್ಯ ರಾತ್ರಿ ಔರಾದ ಘಟಕದಿಂದ ಬಸ್‌ ಹೋಗಿ ಬೆಳಗ್ಗೆ ಬರುತ್ತದೆ. ಅದನ್ನು ಹೊರತುಪಡಿಸಿದರೆ ದಿನ ಪೂರ್ತಿ ಮಹಾರಾಷ್ಟದ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಖಾಸಗಿ ವಾಹನದ ಮೇಲೆ ಗ್ರಾಮಸ್ಥರು ಅವಲಂಬನೆಯಾಗಿದ್ದಾರೆ.

ಗ್ರಾಮದಲ್ಲಿ ಸರಕಾರಿ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೂ ಅದರ ಬಾಗಿಲು ತೆಗೆದಿಲ್ಲ. ಜಿಲ್ಲಾಧಿಕಾರಿ ಎಚ್. ಆರ್‌. ಮಹಾದೇವ ಗ್ರಾಮ ವಾಸ್ತವ್ಯ ಮಾಡಲು ಬಂದಾಗ ಗ್ರಾಮದ ಮುಖಂಡ ರಾಮದಾಸ ಮುಖೇಡಕರ್‌ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ್ಲ. ಇದರಿಂದ ಹೆರಿಗೆ ಸೇರಿದಂತೆ ಸಣ್ಣಪುಟ್ಟ ರೋಗದಿಂದ ಬಳಲುವ ಜನರು 45 ಕಿಮೀ ದೂರದ ಔರಾದ ತಾಲೂಕು ಕೇಂದ್ರಕ್ಕೆ ಅಥವಾ ದಾಬಕಾದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next