ಔರಾದ: ಗ್ರಾಮೀಣ ಭಾಗದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ಗಡಿ ತಾಲೂಕಿನಲ್ಲಿ ರೈಟ್ ಸಂಸ್ಥೆಯಿಂದ 39 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.ಅಧಿಕಾರಿಗಳ ನಿಲಕ್ಷ್ಯ ಹಾಗೂ ಸಂಬಂಧ ಪಟ್ಟ ಕಂಪನಿಯ ಸಿಬ್ಬಂದಿಯ ನಿಷ್ಕಾಳಜಿಯಿಂದ ಅವು ಕಾರ್ಯ ನಿರ್ವಹಿಸದೇ ಮಳೆಗಾಲದಲ್ಲಿ ಸಾರ್ವಜನಿಕರು ಅಶುದ್ಧ ನೀರು ಕುಡಿದು ಆಸ್ಪತ್ರೆಗೆ ಸೇರುವ ಸ್ಥಿತಿ ಬಂದಿದೆ.
Advertisement
ಪ್ರತಿವರ್ಷ ಮಳೆಗಾಲ ಆರಂಭವಾಗುವ ಮುನ್ನ ಶುದ್ಧ ನೀರು ಕುಡಿದು ರೋಗ ಮುಕ್ತ ಜೀವನ ಸಾಗಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಡಂಗುರ ಸಾರಿ ಜನ ಜಾಗೃತಿ ಮೂಡಿಸುತ್ತಾರೆ. ಆದರೆ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿ ಕೊಟ್ಟರೂ ಅದರ ನಿರ್ವಹಣೆ ಮಾಡಲು ಸಾಧ್ಯವಾಗದಿರುವ ರೈಟ್ ಖಾಸಗಿ ಕಂಪನಿ ವಿರುದ್ಧ ತಾಲೂಕಿನ ಶಾಸಕರು ಸಮರ ಸಾರಲು ಮುಂದಾಗಿದ್ದಾರೆ.
Related Articles
Advertisement
ಔರಾದ ತಾಲೂಕು ಕೇಂದ್ರ ಸ್ಥಾನ ಹಾಗೂ ಮಮದಾಪೂರ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಶ್ರಿಮಂತರು 20 ಲೀಟರ್‌ನ ನೀರಿನ ಟ್ಯಾಂಕ್‌ಗೆ 20 ರೂ. ಕೊಟ್ಟು ಖರೀದಿಸಿ ಕುಡಿಯುತ್ತಿದ್ದಾರೆ. ಆದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಹಣ ಇಲ್ಲದಿರುವುದರಿಂದ ತೆರೆದ ಬಾವಿ ಹಾಗೂ ಪಂಚಾಯತನಿಂದ ಸರಬರಾಜು ಮಾಡುವ ನಲ್ಲಿಗಳ ನೀರನ್ನು ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ.
ಅಪೂರ್ಣ ಕಾಮಗಾರಿ: ರೈಟ್ ಸಂಸ್ಥೆಯಿಂದ ತಾಲೂಕಿನಲ್ಲಿ 2016-17ನೇ ಸಾಲಿನಲ್ಲಿ ನಿರ್ಮಿಸಲಾಗಿದ್ದ 39 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಭಾಗಶಃ ಕಾಮಗಾರಿ ಮಾತ್ರ ಮುಕ್ತಾಯವಾಗಿದೆ. ಇನ್ನುಳಿದ ಘಟಕಗಳಲ್ಲಿ ನೀರು ಸರಬರಾಜು ಮಾಡುವ ಪೈಪ್ ಅಳವಡಿಕೆ ಮಾಡಿಲ್ಲ. ಇನ್ನೂ ಕೆಲವು ಕಡೆ ಕಳಪೆ ಕಾಮಗಾರಿ ಸಹ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಶಾಸಕ ಪ್ರಭು ಚವ್ಹಾಣ ಅವರು ಗ್ರಾಮ ಸಂಚಾರ ಮಾಡುವಾಗ ಗ್ರಾಮೀಣ ಭಾಗದ ಜನರು ನೀರು ಶುದ್ಧೀಕರಣ ಘಟಕದ ಬಗ್ಗೆ ತಿಳಿಸಿದ್ದರು. ಹಾಗಾಗಿ ಅವರು ಖುದ್ದು ನೀರು ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ನೋಡಿ, ಇಲಾಖೆಯ ಸಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ್ದರು. ಯಂತ್ರಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಕುರಿತು ಲಿಖೀತ ಪತ್ರ ಬರೆಯಲಾಗಿದೆ. ಪತ್ರಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ರಸ್ತೆಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಾಲೂಕಿನ ಪ್ರತಿ ಗ್ರಾಮಕ್ಕೆ ಗ್ರಾಮ ಸಂಚಾರಕ್ಕೆ ಹೋದಾಗ ನೀರು ಶುದ್ಧೀಕರಣ ಘಟಕದ ದುಸ್ಥಿತಿ ಬಗ್ಗೆ ಗ್ರಾಮಸ್ಥರು ತಿಳಿಸಿದ್ದರು. ಸರ್ಕಾರದಿಂದ ಸಂಪೂರ್ಣ ಹಣ ತೆಗೆದುಕೊಂಡು ಐದು ವರ್ಷ ನಿರ್ವಹಣೆ ಮಾಡುವ ಜವಾಬ್ದಾರಿ ತಮ್ಮದಾಗಿಸಿಕೊಂಡ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಮ್ಮ ತಾಲೂಕಿನಲ್ಲಿ ನಿರ್ಮಿಸಿದ ಶುದ್ಧೀಕರಣ ಘಟಕಗಳು ವಾರದಲ್ಲಿ ಆರರಂಭವಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ.• ಪ್ರಭು ಚವ್ಹಾಣ, ಶಾಸಕರು