ರವೀಂದ್ರ ಮುಕ್ತೇದಾರ
ಔರಾದ: ಕಮಲನಗರ ವ್ಯಾಪ್ತಿಯಲ್ಲಿ ಬರುವ ಚಾಂದೋರಿ ಗ್ರಾಮದ ಅಜ್ಜಿ ಶೇವಂತಾಬಾಯಿ ಶಂಕರರಾವ್ ಪಾಟೀಲ ಅವರಿಗೆ ಈಗ ನೂರೊಂದು ವರ್ಷ. ನೂರೊಂದಾದರೂ ಚಟುವಟಿಕೆಯಿಂದಿರುವ ಅಜ್ಜಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ. ಸರ್ವರಿಗೂ ಮಾರ್ಗದರ್ಶನ ನೀಡುವ ಅಜ್ಜಿ ಗ್ರಾಮದ ಕೇಂದ್ರಬಿಂದುವಾಗಿದ್ದಾಳೆ.
ಕುಟುಂಬದಲ್ಲೇ ಆಗಲಿ, ಗ್ರಾಮದಲ್ಲೇ ಆಗಲಿ ಯಾವುದೇ ಸಮಾರಂಭ ನಡೆದರೂ ಅಜ್ಜಿಯ ಸಲಹೆ ಪಡೆಯುತ್ತಾರೆ. ಸಣ್ಣಪುಟ್ಟ ಸಮಸ್ಯೆಗಳೆಂದು ಮನೆಗೆ ಬರುವ ಬಡವರಿಗೆ ಕೈಲಾದಷ್ಟು ಸಹಾಯ ಮಾಡುವ ಅಜ್ಜಿ ಗ್ರಾಮದ ಎಲ್ಲ ಹಿರಿಯ-ಕಿರಿಯರಿಗೆ ಅಚ್ಚುಮೆಚ್ಚು ಆಗಿದ್ದಾಳೆ.
ನೂರೊಂದಾದರೂ ಅಜ್ಜಿ ಕಣ್ಣಿನ ದೃಷ್ಟಿ ಇನ್ನೂ ಚೆನ್ನಾಗಿದೆ. ಮನೆಯಲ್ಲಿ ಕುಳಿತರೂ ರಸ್ತೆಯಲ್ಲಿ ಹೋಗುವ ಜನರನ್ನು ಗುರುತಿಸಿ, ಮಾತನಾಡಿಸುತ್ತಾಳೆ.ಅಕ್ಕಿ ಹಸ ಮಾಡುವುದು ಸೇರಿದಂತೆ ಒಂದಿಲ್ಲ ಒಂದು ಕೆಲಸದಲ್ಲಿ ನಿರತರಾಗಿರುವಈ ಅಜ್ಜಿ ಬಿಡುವಿನ ಸಮಯದಲ್ಲಿ ದೇವರಿಗೆ ದೀಪ ಹಚ್ಚುವ ಬತ್ತಿ ಸಿದ್ಧಗೊಳಿಸುತ್ತಾರೆ. ಮಕ್ಕಳಿಗೆ ಕಥೆ ಹೇಳುವುದರ ಮೂಲಕ ನೈತಿಕ ಮೌಲ್ಯಗಳನ್ನು ತುಂಬುತ್ತಾಳೆ.
ಆರೋಗ್ಯದ ಗುಟ್ಟು: ನಿತ್ಯ ಬಿಳಿ ಜೋಳದ ರೊಟ್ಟಿ, ಮೊಸರು, ಹಸಿ ತರಕಾರಿ ಪಲ್ಯೆ, ಜೋಳದ ಅಂಬಲಿ, ನುಚ್ಚು, ಮಜ್ಜಿಗೆಯನ್ನು ಸೇವಿಸುವ ಅಜ್ಜಿ ಮನೆಯ ಹಿತ್ತಲಿನಲ್ಲೇ ತಿಪ್ಪೆಗೊಬ್ಬರ ಹಾಕಿ ಬೆಳೆದ ತರಕಾರಿಯನ್ನು ತಿನ್ನುತ್ತಾರೆ. ಅಷ್ಟೇ ಅಲ್ಲ ಮನೆ ಮಂದಿಗೆಲ್ಲ ಇದೇ ತರಕಾರಿ ಬಳಸಲು ಮಾರ್ಗದರ್ಶನ ನೀಡುತ್ತಾರೆ. ಬೇಸಿಗೆಯಲ್ಲಿ ಮಡಿಕೆಗೆ ಬಟ್ಟೆ ಕಟ್ಟಿಕೊಂಡು ಅದರಲ್ಲಿನ ನೀರನ್ನೇ ಸೇವಿಸುವ ಅಜ್ಜಿ ಉಳಿದ ದಿನಗಳಲ್ಲಿ ತಾಮ್ರದ ಕೊಡದಲ್ಲಿ ತುಂಬಿದ ನೀರನ್ನೇ ಬಳಸುತ್ತಾರೆ.
ನೋಡುವುದೇ ಭಾಗ್ಯ: ಅಜ್ಜಿಯನ್ನು ನೋಡಿ ಆಶೀರ್ವಾದ ಪಡೆಯುವುದೇ ಒಂದು ಭಾಗ್ಯ. ಅಜ್ಜಿಯ ನೂರನೇ ವರ್ಷದ ಜನ್ಮದಿನ ಸಂಭ್ರಮಕ್ಕೆ ಬೀದರ ಸಂಸದ ಭಗವಂತ ಖೂಬಾ, ಮಹಾರಾಷ್ಟ್ರದ ಮಾಜಿ ಶಾಸಕ ಗೋವಿಂದ ಕೇಂದ್ರೆ ಸೇರಿದಂತೆ ಇನ್ನಿತರ ಪಕ್ಷಗಳ ಮುಖಂಡರು, ಗಣ್ಯರು ಆಗಮಿಸಿ ಆಶೀರ್ವಾದ ಪಡೆದು ಹೋಗಿದ್ದಾರೆ.
ಅಜ್ಜಿಯ ಬಳಗ: ಅಜ್ಜಿಗೆ ದಿಗಂಬರರಾವ್ ಪಾಟೀಲ, ಚಂದ್ರಕಾಂತ ಪಾಟೀಲಎಂಬ ಇಬ್ಬರು ಪುತ್ರರು, ಸುಶೀಲಾಬಾಯಿ, ರಸಿಕಾಬಾಯಿ, ಸರುಬಾಯಿ ಎಂಬ ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿ 200ಕ್ಕೂ ಹೆಚ್ಚು ಜನರ ಬಳಗ ಹೊಂದಿದ್ದಾಳೆ.