ಹೊಸಬರ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರ ಕನ್ನಡದಲ್ಲಿ ಮತ್ತೂಂದು ವಿಭಿನ್ನ ಶೀರ್ಷಿಕೆ ಚಿತ್ರವೆನಿಸಿದೆ. ಈ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಲೋಕೇಂದ್ರ ಸೂರ್ಯ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣದೊಂದಿಗೆ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ.
ಕಳೆದ ಒಂದೂವರೆ ದಶಕಗಳಿಂದಲೂ ಕನ್ನಡ ಚಿತ್ರರಂಗದ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿರುವ, ಲೋಕೆಂದ್ರ ಸೂರ್ಯ, ನೈಜ ಘಟನೆ ಇಟ್ಟುಕೊಂಡು ಚಿತ್ರದ ಕಥೆ ಹೆಣೆದು ಚಿತ್ರ ನಿರ್ದೇಶಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನೈಜ ಘಟನೆಯೆ ಚಿತ್ರಕ್ಕೆ ಸ್ಫೂರ್ತಿ ಎಂಬುದು ಅವರ ಮಾತು.
ಗದ್ದೆಗಳಿಗೆ ನುಗ್ಗುವ ಹಂದಿಗಳಿಂದ ಶುರುವಾಗುವ ಗಲಾಟೆಯೊಂದು, ಕೊನೆಗೆ ಯಾವ ರೀತಿ ಕ್ರೈಂ ಸ್ಟೋರಿಯಾಗಿ ಬದಲಾಗುತ್ತದೆ ಎನ್ನುವುದನ್ನು ಸಿನಿಮಾದ ಕಥೆ. ಚಿತ್ರದಲ್ಲಿ ಕ್ರೈಂ ಸ್ಟೋರಿಯ ಜೊತೆಗೊಂದು ಲವ್ ಸ್ಟೋರಿಯೂ ಇದೆ. ಆರಂಭದಲ್ಲಿ ಚಿತ್ರದ ಟೈಟಲ್ ಬಗ್ಗೆ ಒಂದಷ್ಟು ನಕಾರಾತ್ಮಕ ಮಾತುಗಳು ಕೇಳಿಬಂದಿದ್ದವು. ಆದರೆ, ಚಿತ್ರದ ಕಥೆಗೆ ಪೂರಕ ಎಂಬ ಕಾರಣಕ್ಕೆ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಶೀರ್ಷಿಕೆ ಅಂತಿಮವಾಗಿದೆ.
ಇನ್ನೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕರಿಗೆ ನಟನೆಯ ಹಿನ್ನೆಲೆಯೇ ಗೊತ್ತಿಲ್ಲವಂತೆ. ಪಾತ್ರಕ್ಕೆ ನೈಜತೆ ಬೇಕು ಎನ್ನವ ಉದ್ದೇಶದಿಂದ ಬಹುತೇಕ ಹೊಸಬರಿಂದಲೇ ಅಭಿನಯವನ್ನು ಮಾಡಿಸಲಾಗಿದೆ ಎನ್ನುತ್ತದೆ ಚಿತ್ರತಂಡ. ಇನ್ನು ಚಿತ್ರದ ಇತರೆ ಕೆಲವು ಮುಖ್ಯ ಪಾತ್ರಗಳಲ್ಲಿ ಮಹದೇವಯ್ಯ, ಚೈತ್ರಾ, ಅರ್ಜುನ ಕೃಷ್ಣ, ತಾತಗುಣಿ ಕೆಂಪೇಗೌಡ, ವಿನಯ್ ಕೂರ್ಗ್, ಎಂ.ಸಿ. ನಾಗರಾಜ್, ಗುಣಶೇಖರ್ ಮತ್ತು ಎನ್.ಎಸ್.ಡಿ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಫೆ. 1 (ನಾಳೆ) ರಾಜ್ಯಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಯಾಗಲಿದೆ.