Advertisement

ದಕ್ಷಿಣದ ಕಾಶಿಯಲ್ಲಿ ಆತ್ಮಗಳ ಮೋಕ್ಷಕ್ಕಾಗಿ ಪಿತೃತರ್ಪಣ

07:50 AM Jul 24, 2017 | Team Udayavani |

ಕಾಸರಗೋಡು: ಅಗಲಿದ ಆತ್ಮಕ್ಕೆ ಮೋಕ್ಷ ಪ್ರಾಪ್ತಿಗಾಗಿ ಪಿತೃ ತರ್ಪಣೆ ಕಾರ್ಯಕ್ರಮ ರಾಜ್ಯದ ವಿವಿಧೆಡೆಗಳಲ್ಲಿರುವ ಕ್ಷೇತ್ರಗಳಲ್ಲಿ ನಡೆಯಿತು. ಆಟಿ ಅಮಾವಾಸ್ಯೆ ದಿನವಾದ ರವಿವಾರ ಮುಂಜಾನೆಯಿಂದಲೇ ಪ್ರಮುಖ ದೇವಾಲಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದು ಪಿತೃ ತರ್ಪಣ ಅರ್ಪಿಸಿದರು.

Advertisement

ಕಾಸರಗೋಡು ಜಿಲ್ಲೆಯ ಪ್ರಮುಖ ಹಾಗು ಇತಿಹಾಸ ಪ್ರಸಿದ್ಧವಾದ ಬೇಕಲ ತೃಕ್ಕನ್ನಾಡಿನಲ್ಲಿ ನಡೆದ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಕಾಸರಗೋಡು, ಅವಿಭಜಿತ ದ.ಕ. ಜಿಲ್ಲೆಗಳ ಸಹಿತ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

ದಕ್ಷಿಣದ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಾಸರಗೋಡು ಜಿಲ್ಲೆಯ ಬೇಕಲದ ತೃಕ್ಕನ್ನಾಡ್‌ ಸಮುದ್ರ ಕಿನಾರೆಯಲ್ಲಿ ಆಟಿ ಅಮಾವಾಸ್ಯೆಯಾದ (ಕರ್ಕಿಡಕಂ) ಜು. 23ರಂದು ಪಿತೃ ತರ್ಪಣ ನಡೆಯಿತು. ಇತಿಹಾಸ ಪ್ರಸಿದ್ಧವಾಗಿರುವ ತೃಕ್ಕನ್ನಾಡ್‌ ತ್ರ್ಯಯಂಬಕೇಶ್ವರ ದೇವಸ್ಥಾನ ಪಿತೃ ತರ್ಪಣೆಗೆ ಖ್ಯಾತಿಯನ್ನು ಪಡೆದಿದೆ. ಇದು ದಕ್ಷಿಣದ ಕಾಶಿ ಎಂದೂ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಟಿ ಅಮಾವಾಸ್ಯೆಯಂದು ಸಾವಿರಾರು ಮಂದಿ ಅಗಲಿಹೋದ ಹಿರಿಯರಿಗೆ ಮೋಕ್ಷ ಲಭಿಸಲು ಪಿತೃ ತರ್ಪಣ ಅರ್ಪಿಸಿದರು.  

ವರ್ಷದಿಂದ ವರ್ಷಕ್ಕೆ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಭಕ್ತರ ಸಂಖ್ಯೆಯ ಹೆಚ್ಚಳವನ್ನು ಪರಿಗಣಿಸಿ ಅವರಿಗೆ ಸಕಲ ಸೌಲಭ್ಯ ಹಾಗೂ ರಕ್ಷಣೆ ನೀಡುವುದಕ್ಕೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿತ್ತು.  ಮಳೆ ಬಿಟ್ಟಿರುವುದರಿಂದ ಪಿತೃ ತರ್ಪಣಕ್ಕೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ.

ಪಿತೃ ತರ್ಪಣೆಯ ಅಂಗವಾಗಿ ಸಮುದ್ರ ಸ್ನಾನ ಮಾಡಬೇಕಾಗಿದ್ದು, ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕದಂತೆ ಲೈಪ್‌ ಜಾಕೆಟ್‌ ಮೊದಲಾದ ಸೌಕರ್ಯ ಗಳನ್ನೊಳಗೊಂಡ ಮುಳುಗು ತಜ್ಞರು ನೇತೃತ್ವದಲ್ಲಿ ಕೋಸ್ಟಲ್‌ ಪೊಲೀಸ್‌ ಕರ್ತವ್ಯ ನಿರ್ವಹಿಸಿದರು.
 
ಸ್ಥಳೀಯ ಪೊಲೀಸರು ಮತ್ತು ಮಹಿಳಾ ಪೊಲೀಸರು ಸಹಕರಿಸಿದರು. ದೇವಸ್ಥಾನ ಪರಿಸರ, ಕೆರೆ, ರಾಜ್ಯ ಹೆದ್ದಾರಿಯಲ್ಲಿ ಮಹಿಳಾ ಪೊಲೀಸರು ಕರ್ತವ್ಯ ಪಾಲಿಸಿದರು.
 
ವಿಶೇಷ ಕೌಂಟರ್‌ ವ್ಯವಸ್ಥೆ 
ಪಿತೃ ತರ್ಪಣಕ್ಕೆ ಹಲವು ಕೌಂಟರ್‌ಗಳನ್ನು ವ್ಯವಸ್ಥೆಗೊಳಿಸ ಲಾಗಿತ್ತು. ನಡೆದಾಡಲು ಸಾಧ್ಯವಾಗದ ಹಾಗೂ ಅಸ್ವಸ್ಥರಾಗಿ ರುವವರಿಗೆ ವಿಶೇಷ ಕೌಂಟರ್‌ ವ್ಯವಸ್ಥೆಗೊಳಿಸಲಾಗಿತ್ತು. ಸರದಿ ಸಾಲು ಕಡಿಮೆ ಮಾಡುವ ಉದ್ದೇಶದಿಂದ ಪೌರೋಹಿತ್ಯ ಕಾರ್ಯದಲ್ಲಿ ಸಹಕರಿಸಲು ಸಾಕಷ್ಟು ಸಂಖ್ಯೆಯಲ್ಲಿ ಪುರೋಹಿತರನ್ನು ನೇಮಿಸಲಾಗಿತ್ತು. ವೃದ್ಧರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಅಕ್ಕಿ, ಹೂ ವಿತರಣೆಗಾಗಿ ಹಲವು ಕೌಂಟರ್‌ಗಳನ್ನು ತೆರೆಯಲಾಗಿತ್ತು.

Advertisement

ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ದೇವಸ್ಥಾನ ಉತ್ಸವ ಸಮಿತಿ ಕಾರ್ಯಕರ್ತರು, ಸತ್ಯಸಾಯಿ ಸೇವಾ ಸಮಿತಿ ಕಾರ್ಯಕರ್ತರು, ದೇವಸ್ಥಾನದ ಭಜನಾ ಸಮಿತಿ, ದೇವಸ್ಥಾನದ ಮುಖ್ಯ ಸಮಿತಿಯ ಕಾರ್ಯಕರ್ತರು ಮೊದಲಾದವರು ಕಾರ್ಯಕ್ರಮಕ್ಕೆ ಕಾರ್ಯಕರ್ತರಾಗಿ ಸಹಕರಿಸಿದರು.

ದೇವಸ್ಥಾನದಲ್ಲಿ ಮುಂಜಾನೆ ತಿಲಾ ಹವನ, ಪ್ರಾರ್ಥನೆಯ ಬಳಿಕ ಪಿತೃ ತರ್ಪಣ ಕಾರ್ಯಕ್ರಮ ಆರಂಭಗೊಂಡಿತು. ಸಾವಿರಾರು ಮಂದಿ ಪಿತೃ ತರ್ಪಣ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next