Advertisement

ಅಂತ್ಯೋದಯ ಆಧಾರಿತ ಆರ್ಥಿಕತೆಗೆ ಒತ್ತು ; ಘನತೆಯಿಂದ ಜೀವನ ಸಾಗಿಸಲು ದಾರಿ ತೋರಿದ ಕೇಂದ್ರ

02:03 AM May 16, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಆರ್ಥಿಕತೆಯ ಕನಸಿಗೆ ಪೂರಕವಾಗಿ ಬುಧವಾರ ಮೊದಲ ಹಂತದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 3 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜನ್ನು ಘೋಷಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಗುರುವಾರ ರೈತರು, ಬಡವರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಮತ್ತೂಂದು ಸುತ್ತಿನ ಪ್ಯಾಕೇಜ್‌ ಹಾಗೂ ಸೌಲಭ್ಯಗಳನ್ನು ಘೋಷಿಸಿದ್ದಾರೆ.

Advertisement

ಇದೆಲ್ಲರ ಮುಖ್ಯ ಉದ್ದೇಶ – ದೇಶದ ಆರ್ಥಿಕತೆಯನ್ನು ಚುರುಕುಗೊಳಿಸುವುದಷ್ಟೇ ಅಲ್ಲದೆ, ಇಡೀ ದೇಶದ ಆರ್ಥಿಕತೆಯನ್ನು ಸ್ವಾವಲಂಬಿಯನ್ನಾಗಿಸುವತ್ತ ಹೆಜ್ಜೆ ಇರಿಸಲಾಗಿದೆ. ಗುರುವಾರ ಪ್ರಕಟಿಸಲಾದ ಯೋಜನೆಗಳನ್ನು ಗಮನಿಸಿದಾಗ, ಬಹುಮುಖ್ಯವಾಗಿ ವಲಸೆ ಕಾರ್ಮಿಕರ, ಕೂಲಿಗಾರರ ಸಮಸ್ಯೆಗಳನ್ನು ನಿವಾರಿಸಲು ಅತ್ಯಂತ ಹೆಚ್ಚಿಗೆ ಗಮನವನ್ನು ನೀಡಿರುವುದು ಗಮನಕ್ಕೆ ಬರುತ್ತದೆ.

ಕೂಲಿ ಕಾರ್ಮಿಕರ ನಿಗದಿತ ಕೂಲಿಯನ್ನು ಹೆಚ್ಚಿಸುವ, ನಗರ ಪ್ರದೇಶಗಳಿಗೆ ಕೂಲಿಗಾಗಿ ವಲಸೆ ಬರುವ ಕಾರ್ಮಿಕರಿಗೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳನ್ನು ವಸತಿ ಸಮುತ್ಛಯವಾಗಿ ಪರಿವರ್ತಿಸಿ ಕೂಲಿಗಾರರ ಕೈಗೆಟಕುವ ಬೆಲೆಯಲ್ಲಿ ಬಾಡಿಗೆಗೆ ನೀಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇನ್ನು, ಅವರ ಕೂಲಿಯನ್ನು ಹೆಚ್ಚಿಸುವುದಕ್ಕಾಗಿ, ಕಾರ್ಮಿಕ ನೀತಿಗಳಲ್ಲೇ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೊಳಗಾಗಿರುವ ಬೀದಿ ಬದಿಯ ವ್ಯಾಪಾರಿಗಳ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ, ಅವರಿಗೆ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಸಾಲ ವಿತರಣೆಗೆ ಮುಂದಾಗಿದೆ. ಅಂದರೆ, ಪ್ರತಿ ಬೀದಿ ಬದಿಯ ವ್ಯಾಪಾರಿಗೆ ತನ್ನ ವ್ಯಾಪಾರ ಪುನರಾರಂಭಿಸಲು 10,000 ರೂ.ಗಳನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ ನೋಂದಾಯಿಸಲ್ಪಟ್ಟಿರುವ ಸುಮಾರು 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಇದರ ಪ್ರಯೋಜನ ಸಿಗಲಿದೆ.


ಇನ್ನು, ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದವರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 2 ಲಕ್ಷ ಕೋಟಿ ರೂ. ಸಾಲ ವ್ಯವಸ್ಥೆ, ಇದರಿಂದ ರೈತರು ಮಾತ್ರವಲ್ಲದೆ, ಮೀನುಗಾರರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೂ ಇದರ ಉಪಯೋಗವನ್ನು ಪಡೆಯಬಹುದಾಗಿದೆ. ಹೊಸದಾಗಿ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಇಲ್ಲದ ರೈತರಿಗಾಗಿ ಹೊಸ ಕ್ರಿಸಾನ್‌ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡಲು ನಿರ್ಧರಿಸಲಾಗಿದೆ.

ಇನ್ನು, ಮುದ್ರಾ ಯೋಜನೆಯಡಿ ನೀಡಲಾಗುವ ಶಿಶು ಸಾಲದ ಮೇಲೆ ವಿಧಿಸಲಾಗುತ್ತಿದ್ದ ಬಡ್ಡಿಯಲ್ಲಿ ಶೇ. 2ರಷ್ಟನ್ನು ಕಡಿಮೆ ಮಾಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ, ಈ ವಲಯದಲ್ಲಿ ಸಾಲಗಾರರ ಮೇಲೆ ಬೀಳುತ್ತಿದ್ದ ಬಡ್ಡಿಯ ಹೊರೆಯಲ್ಲಿ 15,000 ಕೋಟಿ ರೂ. ಕಡಿಮೆಯಾಗಲಿದೆ. ಜತೆಗೆ, 3 ಕೋಟಿ ಜನರಿಗೆ

Advertisement

ಇದರ ಉಪಯೋಗವಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಇದರ ಜೊತೆಗೆ, ಉಚಿತ ಧಾನ್ಯ ವಿತರಣೆ, ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಗೆ ಕೇಂದ್ರ ನೀಡಿರುವ 11,000 ಕೋಟಿ ರೂ.ಗಳನ್ನು ನಗರದಲ್ಲಿರುವ ಬಡವರ ಸಬಲೀಕರಣಕ್ಕೆ ಬಳಸಿಕೊಳ್ಳಲು ಕೇಂದ್ರ ಸೂಚಿಸಿದೆ.

ಇನ್ನು ಕೆಳ ಮಧ್ಯಮ ಕುಟುಂಬಗಳ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ, ಸಬ್ಸಿಡಿಯ ಸಹಾಯದೊಂದಿಗೆ ಸ್ವಂತ ಮನೆ ಕಲ್ಪಿಸಲು ಅವಕಾಶ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ 70,000 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಇದಲ್ಲದೆ, ಹೊಸದಾಗಿ 7,200 ಹೊಸ ಸ್ವಸಹಾಯ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾಗಿದೆ.

ವಲಸಿಗರಿಗಾಗಿ 2 ತಿಂಗಳಲ್ಲಿ ಮಾಡಿದ್ದೇನು?
ಲಾಕ್‌ ಡೌನ್‌ ಆಗಿದ್ದ ಕಳೆದ 2 ತಿಂಗಳಲ್ಲಿ ವಲಸೆ ಕಾರ್ಮಿಕರು ಹಾಗೂ ನಗರಪ್ರದೇಶಗಳ ಬಡವರಿಗೆ ನೆರವಾಗಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

ವಲಸಿಗರಿಗೆ ಆಶ್ರಯ ನೀಡಲು ಹಾಗೂ ಅವರಿಗೆ ಆಹಾರ ಒದಗಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು (ಎಸ್‌ಡಿಆರ್‌ಎಫ್) ಬಳಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿತ್ತು. ಅದಕ್ಕಾಗಿ ಎ. 3ರಂದೇ ಎಲ್ಲ ರಾಜ್ಯಗಳಿಗೂ ತನ್ನ ಪಾಲಿನ 11,002 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿತ್ತು ಎಂದೂ ಅವರು ಹೇಳಿದ್ದಾರೆ.

ಉದ್ಯೋಗ ಖಾತರಿ ಕೂಲಿ ಹೆಚ್ಚಳ: ತಮ್ಮೂರುಗಳಿಗೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರ ಬಗ್ಗೆ ನಮಗೆ ಅನುಕಂಪವಿದೆ. ಹಾಗಾಗಿಯೇ ಅವರ ಕೂಲಿಯನ್ನು 182 ರೂ.ಗಳಿಂದ 202 ರೂ.ಗಳಿಗೆ ಹೆಚ್ಚಿಸಿದ್ದೇವೆ.

ಅಂದರೆ, ಕಾರ್ಮಿಕರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸೇರಿಕೊಂಡ ಕೂಡಲೇ ಈ ಮೊತ್ತ ಅವರ ಕೈಸೇರುತ್ತದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಈ ಮಾಹಿತಿ ನೀಡಲಾಗಿದೆ ಎಂದಿದ್ದಾರೆ ನಿರ್ಮಲಾ.

Advertisement

Udayavani is now on Telegram. Click here to join our channel and stay updated with the latest news.

Next