ನೆಲಮಂಗಲ: ಪಟ್ಟಣದ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆ ಆರೋಪ ಸಂಬಂಧ ಡಾ.ರವಿಕುಮಾರ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ನೋಟಿಸ್ ನೀಡುತ್ತಿದ್ದಂತೆ ವೈದ್ಯ ಪರಾರಿಯಾಗಿದ್ದಾರೆ.
ಆಸರೆ ಆಸ್ಪತ್ರೆ ಎಮ್‌ಟಿಪಿ ಕಾಯಿದೆ ಅಡಿ ಪರವಾನಗಿ ಪಡೆಯದೇ 2021 ರಿಂದ 2024ರವರೆಗೂ, 74 ಭ್ರೂಣಹತ್ಯೆ (ಗರ್ಭಪಾತ)ಗಳನ್ನು ಮಾಡಿರುವ ಅಂಶ ಜಿಲ್ಲಾ ಕುಟುಂಬ ಆರೋಗ್ಯಾಧಿಕಾರಿಗಳ ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಬುಧವಾರ ಆಸ್ಪತ್ರೆಯ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಗಲಾಟೆ ಆಗದಂತೆ ಎಚ್ಚರ ವಹಿಸಿದರು. ಆದರೆ ಆರೋಗ್ಯ ಇಲಾಖೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಯಾವ ಅಧಿಕಾರಿಗಳೂ ಆಸ್ಪತ್ರೆಗೆ ಭೇಟಿ ನೀಡದಿರುವುದು ಸಂಶಯಕ್ಕೆ ಕಾರಣವಾಗಿದೆ. ಆಸರೆ ಸಂಸ್ಥೆಯಲ್ಲಿ ಶೇ.90 ಕೇಸ್‌ಗಳಲ್ಲಿ ವರದಿಗಳು ಇಲ್ಲದಿರುವ ಮಾಹಿತಿ ಲಭ್ಯವಾಗಿತ್ತು. ಮೂರ್‍ನಾಲ್ಕು ಬಾರಿ ತನಿಖೆಗೆ ಕರೆದಿದ್ದರೂ ರವಿಕುಮಾರ್ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು.
ರಿಪೋರ್ಟ್ ನಾಪತ್ತೆ
ಆಸ್ಪತ್ರೆಯಲ್ಲಿ ಬಹುತೇಕ ಗರ್ಭಪಾತಗಳ ಅಲ್ಟ್ರಾಸೌಂಡ್ ರಿಪೋರ್ಟ್ ಇರುತ್ತದೆ. ಇದೂ ಸಹ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ನಡೆಸಿರುವ ಗರ್ಭಪಾತಗಳ ಮಾಸಿಕ ವಿವರ ಗಳನ್ನು, ಇಲ್ಲಿಯವರೆಗೂ ನಿಗದಿತ ನಮೂನೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಕ್ಕೆ, ಸಂಸ್ಥೆಯಲ್ಲಿ ದಾಖಲೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ.