Advertisement

ಆರುಷಿ -ಹೇಮರಾಜ್‌ ಕೊಲೆ ಕೇಸು: ತಲ್ವಾರ್‌ ದಂಪತಿ ಖುಲಾಸೆ

10:22 AM Oct 13, 2017 | |

ಅಲಹಾಬಾದ್‌: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆರುಷಿ ತಲ್ವಾರ್‌- ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಮತ್ತೂಂದು ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರುಷಿ ಹೆತ್ತವರನ್ನು ಅಲಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿ ಗುರುವಾರ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಸಂದರ್ಭವಾಗಲೀ ಅಥವಾ ಸಾಕ್ಷ್ಯಗಳಾಗಲೀ ರಾಜೇಶ್‌ ಹಾಗೂ ನೂಪುರ್‌ ತಲ್ವಾರ್‌ ಅವರನ್ನು ತಪ್ಪಿತಸ್ಥರು ಎಂದು ಸಾಬೀತುಪಡಿಸುವಲ್ಲಿ ವಿಫ‌ಲವಾಗಿದೆ. ಹಾಗಾಗಿ, ಈ ಇಬ್ಬರನ್ನೂ ನಿರ್ದೋಷಿಗಳೆಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Advertisement

ಈ ಮೂಲಕ 2013ರ ನ.28ರಂದು ಗಾಜಿಯಾಬಾದ್‌ ಸಿಬಿಐ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ರಾಜೇಶ್‌-ನೂಪುರ್‌ ದಂಪತಿಯ 9 ವರ್ಷಗಳ ಸಂಕಷ್ಟಕ್ಕೆ ತೆರೆಬಿದ್ದಂತಾಗಿದೆ. ದಂತವೈದ್ಯರಾಗಿರುವ ತಲ್ವಾರ್‌ ದಂಪತಿ ಸದ್ಯ ಗಾಜಿಯಾಬಾದ್‌ನ ದಸ್ನಾ ಜೈಲಿನಲ್ಲಿದ್ದು, ಶುಕ್ರವಾರ ಅವರು ಬಿಡುಗಡೆಯಾಗುವ ಸಾಧ್ಯತೆಯಿದೆ. ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಸಿಬಿಐ, ಆದೇಶವನ್ನು ಅಧ್ಯ ಯನ ಮಾಡಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದಿದೆ.

ನ್ಯಾಯಾಂಗಕ್ಕೆ ಧನ್ಯವಾದ: ಇದೇ ವೇಳೆ, “ಈ ತೀರ್ಪಿಗಾಗಿ ನಾನು ನ್ಯಾಯಾಂಗಕ್ಕೆ ಧನ್ಯವಾದ ಸಲ್ಲಿಸಬಯಸುತ್ತೇನೆ. ಈಗಾ ಗಲೇ ಅವರು (ತಲ್ವಾರ್‌ ದಂಪತಿ) ಸಾಕಷ್ಟು ನೊಂದಿ ದ್ದಾರೆ. ಭಾವನಾತ್ಮಕವಾಗಿಯೂ ಕುಸಿದಿದ್ದಾರೆ. ಈ ವಯ ಸ್ಸಲ್ಲಿ ಮಗಳು ಜೈಲಿನ ಕಂಬಿ ಎಣಿಸುವುದನ್ನು ನೋಡುತ್ತಾ ಕೂರಲು ನನ್ನಿಂದ ಸಾಧ್ಯವಿಲ್ಲ. ಈಗ ಅವರಿಗಾದ ಅನ್ಯಾ ಯವನ್ನು ಸರಿಪಡಿಸಿದ್ದಕ್ಕೆ ನ್ಯಾಯಾಲ ಯಕ್ಕೆ ಋಣಿಯಾಗಿ ರುತ್ತೇನೆ’ ಎಂದು ನೂಪುರ್‌ ಅವರ ತಂದೆ, ವಾಯು ಪಡೆಯ ನಿವೃತ್ತ ಅಧಿಕಾರಿ ಬಿ.ಜಿ.ಚಿಟ್ನಿಸ್‌ ಹೇಳಿದ್ದಾರೆ.

ಆಗಿದ್ದೇನು?
2008ರ ಮೇ ತಿಂಗಳಲ್ಲಿ ತಲ್ವಾರ್‌ ದಂಪತಿಯ ಏಕೈಕ ಪುತ್ರಿ ಆರುಷಿಯ ಮೃತದೇಹ ನೋಯ್ಡಾದಲ್ಲಿರುವ ಅವರ ಮನೆಯೊಳಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ನಡೆದ ಬಳಿಕ ಕೆಲಸದಾಳು ಹೇಮರಾಜ್‌(45) ನಾಪತ್ತೆಯಾಗಿದ್ದರಿಂದ ಆರಂಭದಲ್ಲಿ ಆತನ ಮೇಲೆಯೇ ಸಂಶಯ  ಮೂಡಿತ್ತು. ಆದರೆ, ಒಂದು ದಿನದ ಬಳಿಕ ಹೇಮರಾಜ್‌ ಮೃತದೇಹವು ಅದೇ ಮನೆಯ ಟೆರೇಸ್‌ನಲ್ಲಿ ಪತ್ತೆಯಾ ಗಿತ್ತು. ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡ ಕಾರಣ, ಅಂದಿನ ಸರಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಕೃತ್ಯ ನಡೆದ ದಿನ ಮನೆಗೆ ಹೊರಗಿನವರು ಯಾರೂ ಪ್ರವೇಶಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಕಾರಣ, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ, ತಲ್ವಾರ್‌ ದಂಪತಿಯೇ ಮಗಳು ಮತ್ತು ಕೆಲಸದಾಳನ್ನು ಕೊಂದಿದ್ದಾರೆ ಎಂದಿತ್ತು ಸಿಬಿಐ.

ಕೋರ್ಟ್‌ ಹೇಳಿದ್ದೇನು?

Advertisement

ನಿಸ್ಸಂದೇಹವಾಗಿ ತಲ್ವಾರ್‌ ದಂಪತಿಯೇ ಆರುಷಿ ಮತ್ತು ಹೇಮರಾಜ್‌ನನ್ನು ಕೊಂದಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫ‌ಲವಾಗಿದೆ
ಕೊಲೆ ನಡೆದ ರಾತ್ರಿ ಅವರ ಮನೆಯೊಳಗೆ ಯಾರೂ ಪ್ರವೇಶಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವಲ್ಲೂ ತನಿಖಾ ಸಂಸ್ಥೆ ಸೋತಿದೆ.

ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲಂಬಿಸಿದಂಥ ಕೇಸುಗಳಲ್ಲಿ, ಸಹಜವಾಗಿ ಆರೋಪಿಗಳ ಮೇಲೆ ಸಂದೇಹ ಬರುತ್ತದೆ

ಆದರೆ, ತನಿಖಾ ಸಂಸ್ಥೆಗೆ ಸಿಕ್ಕಿರುವ ಸಾಕ್ಷ್ಯಗಳು ಆರೋಪಿಗಳ ಮೇಲಿನ ಆರೋಪಕ್ಕೆ ಸಂಪೂರ್ಣವಾಗಿ ಪೂರಕವಾಗಿರಬೇಕಾಗುತ್ತದೆ

ಇಲ್ಲಿ ಸಿಬಿಐ ಮಾಡಿರುವ ಊಹೆಯು ನಿರ್ಣಾಯಕವಾಗಿಲ್ಲ. ಅಂದು ಮನೆಗೆ ಯಾರೂ ಬಂದಿಲ್ಲ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫ‌ಲವಾಗಿರುವ ಕಾರಣ, ತನಿಖಾ ಸಂಸ್ಥೆ ಊಹಿಸಿರುವ ಘಟನೆಯ ಸರಣಿಯನ್ನು ಸತ್ಯ ಎಂದು ಒಪ್ಪಿಕೊಳ್ಳಲಾಗದು.

Advertisement

Udayavani is now on Telegram. Click here to join our channel and stay updated with the latest news.

Next