ಹೊಸದಿಲ್ಲಿ: ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಶಾಲಾ ಬಾಲಕಿ ಅರುಷಿ ತಲ್ವಾರ್ ಹತ್ಯೆ ಪ್ರಕರಣ ಕೊನೆಗೂ ರಹಸ್ಯವಾಗಿಯೇ ಅಂತ್ಯ ಕಂಡಿದೆ. ಪ್ರಕರಣದಲ್ಲಿ ಕೊಲೆ ಆರೋಪ ಹೊತ್ತು ಬಂಧಿತರಾಗಿದ್ದ ಅರುಷಿ ಹೆತ್ತವರನ್ನು ಕಳೆದ ವರ್ಷ ಅ.12ರಂದು, ಅಲಹಾಬಾದ್ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆ ಕಾರಣ ಹೇಳಿ ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಕರಣದ ತನಿಖೆ ನಡೆಸಿರುವ ಸಿಬಿಐಗೆ 90 ದಿನಗಳ ಕಾಲಾವಕಾಶವಿತ್ತು. 2008ರ ಮೇ 16ರಂದು ನೊಯ್ಡಾದಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದಲ್ಲಿ, ದಂತ ವೈದ್ಯ ದಂಪತಿ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಪುತ್ರಿ, 14 ವರ್ಷದ ಅರುಷಿ, ತನ್ನ ಮನೆಯ ಬೆಡ್‌ರೂಂನಲ್ಲಿ ಕೊಲೆಯಾಗಿದ್ದಳು. ಆಗ, ಮೊದಲ ಅನುಮಾನ ಮನೆಕೆಲಸದಾತ ಹೇಮರಾಜ್ ಮೇಲೆ ಹರಿದಿತ್ತು. ಆ ಸಂದರ್ಭದಲ್ಲಿ ಆತ ನಾಪತ್ತೆಯಾಗಿದ್ದ. ಆದರೆ, ಎರಡು ದಿನಗಳ ನಂತರ, ಹೇಮರಾಜ್ ಶವ, ಅದೇ ಮನೆಯ ತಾರಸಿಯ ಮೇಲೆ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿತ್ತು. ಪ್ರಕರಣವು, ಸಿಬಿಐ ಕೈಗೆ ಹೋಗಿ, ತಲ್ವಾರ್ ದಂಪತಿ ಬಂಧಿತರಾಗಿದ್ದರು.