Advertisement

ದೇಗುಲಗಳಲ್ಲಿ ಸಲಾಂ ಆರತಿ ಬದಲು ಆರತಿ ನಮಸ್ಕಾರ; ಟಿಪ್ಪು ಕಾಲದ ಪದ್ಧತಿ ಕೈಬಿಡಲು ನಿರ್ಧಾರ

11:56 PM Dec 09, 2022 | Team Udayavani |

ಮಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇಗುಲ ಗಳಲ್ಲಿ ಟಿಪ್ಪು ಆಳ್ವಿಕೆ ಸಂದರ್ಭ ಜಾರಿಗೆ ತಂದಿದ್ದ “ದೀವಟಿಗೆ ಸಲಾಂ’ ಎಂಬ ಪದವನ್ನು ಕೈಬಿಡಲು ಇಲಾಖೆ ತೀರ್ಮಾನಿಸಿದೆ.

Advertisement

ಈ ಕುರಿತು ಈಗಾಗಲೇ ಧಾರ್ಮಿಕ ಪರಿಷತ್‌ ಅಂತಿಮ ನಿರ್ಣಯ ಕೈಗೊಂಡಿದ್ದು, “ಸಲಾಂ ಆರತಿ’ ಪದದ ಬದಲಾಗಿ “ಆರತಿ ನಮಸ್ಕಾರ’ ಹಾಗೂ “ಸಲಾಂ ಮಂಗಳಾ ರತಿ’ ಬದಲು “ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸಿ, ಸೇವೆಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ತೀರ್ಮಾನಿಸಿದೆ. ಈ ಬಗ್ಗೆ ಇಲಾಖೆಯಿಂದ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು.

ಸಲಾಂ ಪದವು ಸಂಸ್ಕೃತ ಭಾಷೆಯದ್ದಲ್ಲ, ಹಾಗಾಗಿ ಹಿಂದೂ ಧಾರ್ಮಿಕ ದತ್ತಿ ದೇವಾ ಲಯಗಳಲ್ಲಿ ಸಂಸ್ಕೃತ ಪದಗಳಿಂದ ಹೇಗೆ ದೇವರ ಸೇವೆಗಳನ್ನು ನಡೆಸಲಾಗುತ್ತದೆಯೋ ಅದೇ ರೀತಿ ಸಲಾಂ ಬದಲಿಗೆ ಬೇರೆ ಸಂಸ್ಕೃತ ಪದವನ್ನು ಬಳಸಬೇಕು ಎಂದು ಪರಿಷತ್‌ ಸದಸ್ಯರು ಹೇಳಿದ್ದರು.

ಈ ಬಗ್ಗೆ ಆಗಮ ಪಂಡಿತರೊಂದಿಗೆ ಕೂಡ ಚರ್ಚಿಸಲಾಗಿದ್ದು, ಯಾವುದೇ ಪೂಜಾ ವಿಧಿ ವಿಧಾನಗಳಲ್ಲಿ, ಸೇವಾ ಕಾರ್ಯಗಳಲ್ಲಿ ಬದಲಾವಣೆ ಯಾಗುವುದಿಲ್ಲ. ಎಲ್ಲ ಸೇವಾ ಕಾರ್ಯಗಳು ಹಿಂದಿನಿಂದ ನಡೆದು ಬಂದ ರೂಢಿ, ಸಂಪ್ರದಾಯ ಪದ್ಧತಿ ಯಂತೆಯೇ ನಡೆಯುತ್ತವೆ. “ಸಲಾಂ’ ಪದ ಮಾತ್ರ ಕಳಚಿಕೊಂಡು ನಮಸ್ಕಾರ ಎಂಬ ಸಂಸ್ಕೃತ ಪದವನ್ನು ಬಳಸಿಕೊಳ್ಳಲಾಗುತ್ತದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯಾದ್ಯಂತ ಈ ಆಚರಣೆ ಇದೆ.

Advertisement

“ಮುಜರಾಯಿ’ ಪದ ಬಳಕೆಯೂ ಬೇಡ
ಪರ್ಷಿಯನ್‌ ಪದವಾದ “ಮುಜರಾಯಿ’ ಬಳಕೆಯನ್ನು ಕೂಡ ಹಿಂದೆಯೇ ಕೈಬಿಡಲಾಗಿತ್ತು. ಆದರೂ ಈಗಲೂ ಅದು ರೂಢಿ ಯಲ್ಲಿದೆ. ಆದರೆ ಇನ್ನು ಮುಂದೆ ಆ ಪದ ಬಳಕೆ ಮಾಡಬಾರದು. “ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿ ಇಲಾಖೆ’ ಎಂದೇ ಕರೆಯಬೇಕು ಎಂಬ ಸುತ್ತೋಲೆಯನ್ನೂ ಕಳುಹಿಸಲು ತೀರ್ಮಾನಿಸಲಾಗಿದೆ.

” ದೀವಟಿಗೆ ಸಲಾಂ’ ಎನ್ನುವುದು ಟಿಪ್ಪು ಸುಲ್ತಾನ್‌ ಆಡಳಿತದ ಸಂದರ್ಭ ಇದ್ದ ಆಚರಣೆ. ಹೊಸ ತೀರ್ಮಾನ ದಂತೆ ಇನ್ನು ಮುಂದೆ ನಮ್ಮ ರಾಜ್ಯವನ್ನಾಳುವವರು ಹಾಗೂ ಜನತೆಗೆ ಒಳಿತಾಗಲಿ ಎಂಬ ಆಶಯದೊಂದಿಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಪದ್ಧತಿಯ ಹೆಸರು ಮಾತ್ರ “ಆರತಿ ನಮಸ್ಕಾರ’ ಎಂದಿರುತ್ತದೆ. ಶೀಘ್ರವೇ ಇದರ ಸುತ್ತೋಲೆ ದೇವಾಲಯಗಳಿಗೆ ತಲಪಲಿದೆ.
– ಕಶೆಕೋಡಿ ಸೂರ್ಯನಾರಾಯಣ ಭಟ್‌,
ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next