ನವದೆಹಲಿ: ಜಗತ್ತಿನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಕಂಡ ಕೋವಿಡ್ 19 ಟ್ರ್ಯಾಕಿಂಗ್ ಆ್ಯಪ್ ಗಳಲ್ಲಿ ಆರೋಗ್ಯ ಸೇತು ಮೊದಲ ಸ್ಥಾನ ಪಡೆದುಕೊಂಡಿದೆ. ಸೆನ್ಸಾರ್ ಟವರ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಏಪ್ರೀಲ್ ನಲ್ಲಿ ಆರೋಗ್ಯ ಸೇತು ಸರಿಸುಮಾರು 80.8 ಮಿಲಿಯನ್ ಡೌನ್ ಕಂಡಿತ್ತು. ಆದರೇ ಜುಲೈ ವೇಳೆಗೆ ಗೂಗಲ್ ಮತ್ತು ಆ್ಯಪಲ್ ಸ್ಟೋರ್ ಗಳಿಂದ 127.6 ಮಿಲಿಯನ್ ಭಾರೀ ಡೌನ್ ಲೋಡ್ ಆಗಿವೆ.
ಜಗತ್ತಿನಾದ್ಯಂತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಅನೇಕ ದೇಶಗಳು ಸೊಂಕಿತರನ್ನು ಪತ್ತೆಹಚ್ಚಲು ಟ್ರ್ಯಾಕಿಂಗ್ ಆ್ಯಪ್ ಗಳನ್ನು ಬಳಕೆಗೆ ತಂದಿವೆ. ಆದರೇ ಭಾರತದ ಆರೋಗ್ಯ ಸೇತುವಿನ ಡೌನ್ ಲೋಡ್ ಸಂಖ್ಯೆ ಜಾಗತಿಕ ಮಟ್ಟದಲ್ಲಿಯೇ ಹೆಚ್ಚು ಎಂದು ಸೆನ್ಸಾರ್ ಟವರ್ ವರದಿ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿ ಬಳಕೆಯಲ್ಲಿರುವ ಕೋವಿಡ್ ಸೇಫ್ ಆ್ಯಪ್ 4.5 ಮಿಲಿಯನ್ ಡೌನ್ ಲೋಡ್ ಗಳನ್ನು ಕಂಡಿದೆ. ಇಲ್ಲಿನ ಒಟ್ಟು ಜನಸಂಖ್ಯೆ 21.6% ಜನರು ಮಾತ್ರ ಈ ಆ್ಯಪ್ ಬಳಸುತ್ತಿದ್ದಾರೆ. ಆದರೇ ಈ ಆ್ಯಪ್ ಕೆಲದಿನಗಳ ಕಾಲ ಆ್ಯಪಲ್ ಸ್ಟೋರ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಭಾರತದ ಒಟ್ಟು ಜನಸಂಖ್ಯೆಯ 12.5% ಜನರು ಮಾತ್ರ ಆರೋಗ್ಯ ಸೇತು ಬಳಸುತ್ತಿದ್ದಾರೆ.
ಆಸ್ಟ್ರೇಲಿಯಾ, ಭಾರತ, ಟರ್ಕಿ, ಜರ್ಮನಿ, ಇಟಲಿ, ಪೆರು, ಜಪಾನ್, ಸೌದಿ ಅರೇಬಿಯಾ, ಫ್ರಾನ್ಸ್, ಇಂಡೋನೇಷಿಯಾ, ಥಾಯ್ ಲ್ಯಾಂಡ್, ವಿಯೇಟ್ನಾಂ, ಫಿಲಿಫೈನ್ಸ್ ಈ 13 ರಾಷ್ಟ್ರಗಳಲ್ಲಿ ಸೆನ್ಸಾರ್ ಟವರ್ ಸಮೀಕ್ಷೆ ನಡೆಸಿದೆ.