ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮು ಗಲಭೆಯಲ್ಲಿ ಆರಗ ಜ್ಞಾನೇಂದ್ರ ಮುಂಚೂಣಿಯಲಿದ್ದು ಕ್ಷೇತ್ರದಲ್ಲಿ ಕೋಮು ಗಲಭೆ ನಡೆಯಲು ಅವರೇ ನೇರ ಕಾರಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಆರಗ ಜ್ಞಾನೇಂದ್ರ ವೈಫಲ್ಯ, ಗೃಹ ಇಲಾಖೆಯಲ್ಲಿ ಅಸಮರ್ಥ ನಿರ್ವಹಣೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹೀಗೆ ಹತ್ತು -ಹಲವು ಸಮಸ್ಯೆಗಳನ್ನು ಖಂಡಿಸಿ ಶುಕ್ರವಾರ ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಜಾಲನೆ ನೀಡಿ ಅವರು ಮಾತನಾಡಿದರು.
ಆರಗ ಜ್ಞಾನೇಂದ್ರ ಗೃಹ ಮಂತ್ರಿ ಯಾದ ಮೇಲೆ ಅವರ ಹೇಳಿಕೆಗಳಿಂದ ಕ್ಷೇತ್ರದ ಜನರಿಗೆ ಮುಜುಗರ ಆಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯ ಎಂಬ ಸ್ಥಿತಿ ಇದೆ. ಗೃಹ ಸಚಿವ ಆರಗ ರಾಜೀನಾಮೆಗೆ ಕಿಮ್ಮನೆ ಆಗ್ರಹ ಒಂದು ನ್ಯಾಯ ಆಗಿದೆ. ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಜ್ಞಾನೇಂದ್ರ ಅವರ ಹಿಂಬಾಲಕರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ತೀರ್ಥಹಳ್ಳಿಯಲ್ಲಿ ಮರಳು, ಕಲ್ಲು, ಮಣ್ಣು ಅಕ್ರಮ ಸಾಗಾಟ ನಿರಂತರವಾಗಿದೆ. ಬಿಜೆಪಿಯವರು ಮರಳು ಹೊಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಆರಗ ಜ್ಞಾನೇಂದ್ರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದರೆ, ಕಲಬುರಗಿಯ ಬಿಜೆಪಿ ಅಧ್ಯಕ್ಷೆ ದಿವ್ಯಾ ಹಾಗರಗಿ ತೀರ್ಥಹಳ್ಳಿಗೆ ಬಂದು ಹೋಗಿದ್ದು, ತಾಪಂ ಮಾಜಿ ಸದಸ್ಯರು ಹಗರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹಾಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಹೊಣೆ ಹೊತ್ತು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ ಎಂದರು.
ಪಾದಯಾತ್ರೆಯಲ್ಲಿ ಕೆಪಿಸಿಸಿ ಸದಸ್ಯ ನಾರಾಯಣರಾವ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಸ್ತೂರು ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್. ಯಲ್ಲಪ್ಪ, ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ್, ಕಲ್ಪನಾ ಪದ್ಮನಾಭ್, ಪಪಂ ಅಧ್ಯಕ್ಷೆ ಶಬ್ನಂ, ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ, ಸದಸ್ಯರಾದ ಸುಶೀಲಾ ಶೆಟ್ಟಿ, ಗೀತಾ ರಮೇಶ್ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.