ಕೆಲವು ಸಿನಿಮಾಗಳು ಕಮರ್ಷಿಯಲ್ ಅಂಶಗಳನ್ನು ಬಿಟ್ಟು, ಅದರ ಕಥಾಹಂದರ, ಪರಿಸರ, ಆಶಯದಿಂದ ಇಷ್ಟವಾಗುತ್ತವೆ. ಇಂತಹ ಸಿನಿಮಾಗಳಲ್ಲಿ ಒಂದು ಪ್ರಾಮಾಣಿಕ ಪ್ರಯತ್ನವಿರುತ್ತದೆ. ಈ ವಾರ ತೆರೆಕಂಡಿರುವ “ಆರ’ ಸಿನಿಮಾ ಕೂಡಾ ಇಂತಹ ಪ್ರಾಮಾಣಿಕ ಪ್ರಯತ್ನದಿಂದ ಮೂಡಿಬಂದ ಸಿನಿಮಾ.
ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ಒಂದು ಒಳ್ಳೆಯ ಉದ್ದೇಶವಿದೆ, ಜೊತೆಗೆ ಅದನ್ನು ವಿಭಿನ್ನವಾಗಿ ಹೇಳಬೇಕೆಂಬ ತವಕವಿದೆ, ರೆಗ್ಯುಲರ್ ಶೈಲಿಯನ್ನು ದಾಟಿ ಪ್ರೇಕ್ಷಕಕನ ಮನಸ್ಸು ಗೆಲ್ಲಬೇಕು ಎಂಬ ಹಂಬಲವೂ ಇದೆ. ತಮ್ಮ ಸೀಮಿತ ಅವಕಾಶಗಳಲ್ಲಿ “ಆರ’ ತಂಡ ಒಂದು ಹೊಸ ಕಂಟೆಂಟ್ ಅನ್ನು ಕಟ್ಟಿಕೊಟ್ಟಿದೆ.
“ಆರ’ ಸಿನಿಮಾ ಎರಡು ಆಯಾಮಗಳಿಂದ ಸಾಗುತ್ತದೆ. ಒಂದು ಅರಣ್ಯ ನಾಶ ಮತ್ತು ಮನುಷ್ಯನೊಳಗಿನ ಮುಗ್ಧತೆ ನಾಶವಾದಾಗ ಏನಾಗುತ್ತದೆ ಎಂಬುದು. ಅರಣ್ಯ ನಾಶದ ಟ್ರ್ಯಾಕ್ ಬಂದಾಗ ಅದಕ್ಕೊಂದು ದೈವಿಕತೆಯ ಸ್ಪರ್ಶ ನೀಡಲಾಗಿದೆ. ಕಾಡಿನೊಳಗಿರುವ ದೇವಸ್ಥಾನ, ನಾಗಬನಗಳು ಅರಣ್ಯವನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ. ಈ ಅಂಶವನ್ನು ಸಿನಿಮಾದಲ್ಲಿ ತುಂಬಾ ಅಚ್ಚುಕಟ್ಟಾಗಿ ಬಳಸಿಕೊಳ್ಳಲಾಗಿದೆ. ಒಂದೇ ಮಾತಲ್ಲಿ ಹೇಳಬೇಕಾದರೆ ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆ ಎನ್ನಬಹುದು. ಇಲ್ಲಿ ಮನುಷ್ಯನ ದುರಾಸೆ, ಅಹಂ ಹೇಗೆ ಆತನಿಗೆ ಗೊತ್ತಿಲ್ಲದೇ ಆತನನ್ನು ಕೆಟ್ಟ ಹಾದಿಗೆ ದೂಡುತ್ತದೆ ಎಂಬ ಅಂಶವನ್ನು ಹಲವು ಸನ್ನಿವೇಶಗಳ ಮೂಲಕ ಹೇಳಲಾಗಿದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಆಶಯ ಚೆನ್ನಾಗಿದೆ.
ಇಡೀ ಕಥೆಯನ್ನು ಹೊಸ ಶೈಲಿಯಲ್ಲಿ ನಿರೂಪಿಸಲು ನಿರ್ದೇಶಕರು ಪ್ರಯತ್ನಿಸಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ. ಇಲ್ಲಿ ಕಾಲೆಳೆಯುವವರು, ಕೈ ಹಿಡಿಯುವವರು, ಕೊಲ್ಲುವವರು, ಕಾಯುವವರು ಎಲ್ಲರೂ ಇದ್ದಾರೆ. ಒಂದು ಪ್ರಯತ್ನವಾಗಿ “ಆರ’ ಮೆಚ್ಚುಗೆಗೆ ಪಾತ್ರವಾಗುವ ಚಿತ್ರ.
ನಾಯಕ ರೋಹಿತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ, ಗಮನ ಸೆಳೆದಿದ್ದಾರೆ. ಇನ್ನು ಚಿತ್ರದಲ್ಲಿ ನಟಿಸಿರುವ ಆನಂದ್ ನೀನಾಸಂ ಸೇರಿದಂತೆ ಇತರರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.
ಆರ್.ಪಿ.ರೈ