ಚಂಡೀಗಢ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗಕ್ಕೊಳಗಾಗಿದೆ. ಅಷ್ಟೇ ಅಲ್ಲ ಪ್ರಭಾವಿ ನಾಯಕರು ಆಮ್ ಆದ್ಮಿ ಪಕ್ಷದ ಸಾಮಾನ್ಯ ಅಭ್ಯರ್ಥಿಗಳ ಎದುರು ಪರಾಜಯಗೊಂಡಿದ್ದಾರೆ.
ಇದನ್ನೂ ಓದಿ:ಪಂಜಾಬ್: ಸೋನು ಸೂದ್ ಅವರ ಸಹೋದರಿಗೆ ಸೋಲುಣಿಸಿದ ಆಪ್
ಪಂಜಾಬ್ ನ ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಚರಣ್ ಜಿತ್ ಸಿಂಗ್ ಚನ್ನಿಯನ್ನು ಸೋಲಿಸಿದ್ದು ಯಾರು ಗೊತ್ತಾ? ಭದೌರ್ ನ ಲಾಭ್ ಸಿಂಗ್ ಉಗೋಕೆ, ಈ ಲಾಭ್ ಸಿಂಗ್ ಯಾರು ಗೊತ್ತಾ…ಈತ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿ. ಹಾಲಿ ಸಿಎಂ ಚನ್ನಿಯನ್ನು ಲಾಭ್ ಸಿಂಗ್ 40,000 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಬ್ಬ ಜನಸಾಮಾನ್ಯ ವ್ಯಕ್ತಿ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂಬುದಾಗಿ ತಿಳಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೌರ್ ಮತ್ತು ಲಾಭ್ ಸಿಂಗ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲಾಭ್ ಸಿಂಗ್ ಉಗೋಕೆ ತಾಯಿ ಸರ್ಕಾರಿ ಶಾಲೆಯಲ್ಲಿ ಸಫಾಯಿ ಕರ್ಮಾಚಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈತನ ತಂದೆ ಕೂಲಿ ಕಾರ್ಮಿಕ. ಸಾಮಾನ್ಯ ವ್ಯಕ್ತಿ ಲಾಭ್ ಸಿಂಗ್ ಚರಣ್ ಜಿತ್ ಚನ್ನಿಯನ್ನು ಇಂದು ಸೋಲಿಸಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಸ್ಟಾರ್ ಪ್ರಚಾರಕ ನವಜ್ಯೋತ್ ಸಿಂಗ್ ಸಿಧುವನ್ನು ಸೋಲಿಸಿದ್ದು ಯಾರು ಗೊತ್ತಾ? ನಮ್ಮ ಸಾಮಾನ್ಯ ಸ್ವಯಂಸೇವಕಿ ಜೀವನ್ ಜ್ಯೋತ್ ಕೌರ್ ಎಂಬಾಕೆ. ಇದು ಜನಸಾಮಾನ್ಯರ ತಾಕತ್ತು. ಅದಕ್ಕಾಗಿ ನಾನು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ನಿಮ್ಮ ಶಕ್ತಿಯನ್ನು ತಿಳಿದುಕೊಳ್ಳಿ, ಈಗಾಗಲೇ 75 ವರ್ಷಗಳು ಕಳೆದು ಹೋಗಿದೆ.. ಇನ್ನು ಮುಂದೆ ಸಮಯ ವ್ಯರ್ಥ ಮಾಡದಿರಿ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.