ನವದೆಹಲಿ:ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ್ ಮಾನ್ ಆಪ್ ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ( ಜನವರಿ 18) ಘೋಷಿಸಿದ್ದಾರೆ.
ಇದನ್ನೂ ಓದಿ:15 ನಿಮಿಷದ ವಿಳಂಬಕ್ಕೆ ಕರ್ನಾಟಕದ ಸ್ಥಬ್ದಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿತ್ತು!
ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಮತದಾರರೇ ಸೂಚಿಸಬೇಕೆಂಬ ಎಂಬ ಪ್ರಚಾರಾಂದೋಲನದಲ್ಲಿ ಸುಮಾರು 22 ಲಕ್ಷಕ್ಕೂ ಅಧಿಕ ಮಂದಿ ನೀಡಿರುವ ಪ್ರತಿಕ್ರಿಯೆಯ ಆಧಾರದ ಮೇಲೆ ಭಗವಂತ್ ಮಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಭಗವಂತ್ ಮಾನ್ ಪಂಜಾಬ್ ನ ಸಂರ್ಗೂರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಪಂಜಾಬ್ ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುವಂತೆ ಕೇಜ್ರಿವಾಲ್ ಜನವರಿ 13ರಂದು ಮನವಿ ಮಾಡಿಕೊಂಡಿದ್ದು, ಈ ಉದ್ದೇಶಕ್ಕಾಗಿ ಮೊಬೈಲ್ ನಂಬರ್ ಅನ್ನು ಪ್ರಕಟಿಸಿದ್ದರು.
ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಆಮ್ ಆದ್ಮಿ ಪಕ್ಷ ಮಾತ್ರವೇ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿದೆ. ಇನ್ನುಳಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವ ಪಕ್ಷವೂ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹರ್ಪಾಲ್ ಸಿಂಗ್ ಚೀಮಾ ತಿಳಿಸಿದ್ದಾರೆ.