ಹೊಸದಿಲ್ಲಿ : ವ್ಯಕ್ತಿಯೊಬ್ಬನಿಂದ 25 ಲಕ್ಷ ರೂ. ನಗದು ಮತ್ತು ಇತರ ಅಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಯುವ ದಳದ ನಾಯಕ ಎನ್ನಲಾದ ವ್ಯಕ್ತಿಯೊಬ್ಬನನ್ನು ದಿಲ್ಲಿ ಪೊಲೀಸರು ಆತನ ಐವರು ಸಹಚರರೊಂದಿಗೆ ಬಂಧಿಸಿದ್ದಾರೆ.
ಬಂಧಿತನಾಗಿರುವ 25ರ ಹರೆಯದ ನಜೀಬ್ ಎಂಬಾತ ಜಫ್ರಾಬಾದ್‌ನ ಆಪ್ ಯುವದಳದ ನಾಯಕನೆಂದು ಹೇಳಲಾಗಿದೆ. ಆದರೆ ಆಮ್ ಆದ್ಮಿ ಪಕ್ಷವು ಈ ವ್ಯಕ್ತಿಯೊಂದಿಗೆ ತನಗೆ ಯಾವುದೇ ಸಂಬಂಧ ಇಲ್ಲವೆಂದು ಸ್ಪಷ್ಟಪಡಿಸಿದೆ.
ದರೋಡೆಗೊಳಗಾದ ವಿಪುಲ್ ಜೈನ್ ಎಂಬ ಉದ್ಯಮಿಯು ಹೇಳಿರುವಂತೆ ಈ ಘಟನೆಯು ಕಳೆದ ಮಾರ್ಚ್ 12ರಂದು ಮೌಜ್‌ಪುರದ ಕೃಷ್ಣ ಗಾಲಿ ಎಂಬಲ್ಲಿ ನಡೆದಿದೆ. ಆರೋಪಿಗಳು ತನಗೆ ಬಂದೂಕು ತೋರಿಸಿ ಪ್ರಾಣಭಯ ಒಡ್ಡಿ 25 ಲಕ್ಷ ರೂ. ನಗದು, ಒಂದು ಮೊಬೈಲ್ ಫೋನ್ ಮತ್ತು ಇತರ ದಾಖಲೆಪತ್ರಗಳನ್ನು, ಲೂಟಿ ಮಾಡಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಈ ಗ್ಯಾಂಗ್‌ನವರು ನಡೆಸಿದ ಗುಂಡು ಹಾರಾಟದಲ್ಲಿ ಒಬ್ಬ ದಾರಿಹೋಕನು ಗಾಯಗೊಂಡಿದ್ದಾನೆ.
ಗ್ಯಾಂಗಿನ ಒಬ್ಟಾತನನ್ನು ದಾರಿ ಹೋಕರು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಜೀಬ್ ಸೇರಿದಂತೆ ಆತನ ಉಳಿದ ನಾಲ್ವರು ಸಹಚರರು ಸ್ಥಳದಿಂದ ಎಸ್ಕೇಪ್ ಆದರೂ ಅನಂತರ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ 16,06,000 ರೂ. ನಗದು, ಒಂದು ನಾಡ ಪಿಸ್ತೂಲು, ಹಾಗೂ ಅವರು ಅಪಹರಿಸಿದ್ದ ಒಂದು ಮೋಟಾರ್‌ಸೈಕಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ತಾವು ಈ ರೀತಿಯ ಸುಮಾರು 20 ದರೋಡೆ ಕೃತ್ಯಗಳನ್ನು ಎಸಗಿರುವುದಾಗಿ ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದಾರೆ.