Advertisement

ಸಂತೋಷ ಕುಟುಂಬಕ್ಕೆ ನ್ಯಾಯ ಸಿಗೋದು ಅನುಮಾನ

12:57 PM Apr 17, 2022 | Team Udayavani |

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಸಾವಿನ ಪ್ರಕರಣದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ಸಿಗುವುದು ಅನುಮಾನ ಎಂದು ಮಾಜಿ ಪೊಲೀಸ್‌ ಅಧಿಕಾರಿ, ಆಮ್‌ ಆದ್ಮಿ ಪಕ್ಷದ ಮುಖಂಡ ಭಾಸ್ಕರರಾವ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಮಾಡಿರುವ ಖರ್ಚು, ಸಾಲದ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವುದಾಗಿ ಯಾರೊಬ್ಬರೂ ಹೇಳಿಲ್ಲ. ಸಿಐಡಿ ತನಿಖೆಗೆ ಒಪ್ಪಿಸಿದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತಲ್ಲವೇ ಎಂದರು.

ಸಂತೋಷ ವಿಶ್ವಾಸದ ಮೇಲೆ ಕೆಲಸ ಮಾಡಿದ್ದರು. ಅವರನ್ನು ಅವಮಾನ ಮಾಡಿ, ಕಾಯಿಸಿರುವುದು ಆತ್ಮಹತ್ಯೆಗೆ ಕಾರಣವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಮಗಾರಿ ಆರಂಭವಾದ ಬಳಿಕವಾದರೂ ಹಣ ಬಿಡುಗಡೆ ಮಾಡಿಸಬೇಕಿತ್ತು. ಎರಡೂ ಪಕ್ಷಗಳು ಮೊಸಳೆ ಕಣ್ಣೀರು ಹಾಕುವುದನ್ನು ಬಿಡಬೇಕು ಎಂದು ಕಿಡಿಕಾರಿದರು.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆ.ಎಸ್‌. ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಿದೆ. ಅವರನ್ನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇಂತಹ ಪ್ರಕರಣದಲ್ಲಿ ಸರ್ಕಾರವೇ ತನಿಖಾ ಅಧಿಕಾರಿ ಆಗುತ್ತದೆ. ಪೊಲೀಸರು ತನಿಖಾಧಿಕಾರಿ ಆಗಲ್ಲ. ಕೋರ್ಟ್‌ ಮಧ್ಯಸ್ಥಿಕೆಯಲ್ಲಿ ಇದರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಎರಡೂ ಪಕ್ಷಗಳ ದುರಾಡಳಿತ, ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೇನೆ. ಭ್ರಷ್ಟಾಚಾರ ನೇರವಾಗಿ ಜನರ ಮೇಲೆ ಪರಿಣಾಮ ಬೀರಲಿದೆ. ಸಂತೋಷ ಪಾಟೀಲ್‌ ಮನವಿ ಕೊಟ್ಟಿದ್ದ ವೇಳೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸಂತೋಷ ಪಾಟೀಲ್‌ ಕೊಟ್ಟಿದ್ದ ಮನವಿ ಇನ್ನೂ ವಿಚಾರಣೆ ಆಗಿಲ್ಲ. ನಾವು ನೀವು ಯಾರಾದರೂ ಅಪರಾಧ ಮಾಡಿದ್ದರೆ ಇಷ್ಟೊತ್ತಿಗೆ ಹಿಂಡಲಗಾ ಜೈಲಿಗೋ, ಪರಪ್ಪನ ಅಗ್ರಹಾರದಲ್ಲಿ ಇರುತ್ತಿದ್ದೇವು ಎಂದರು.

Advertisement

ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ. ಪಂಜಾಬ್‌ ನಲ್ಲಿ ನಮ್ಮ ಸಂಘಟನೆ, ನೈತಿಕ ಶಕ್ತಿಯಿಂದ ಗೆಲುವು ಸಾಧಿಸಿದ್ದು, ಇದು ಜನರ ಶಕ್ತಿಯಿಂದ ಸಾಧ್ಯವಾಗಿದೆ. ತ್ಯಾಗದ ಮನೋಭಾವದಿಂದ ದೇಶದ ಪ್ರಗತಿಗಾಗಿ ಆಪ್‌ ಪಕ್ಷ ಸ್ಥಾಪನೆ ಆಗಿದೆ. ರಾಜಕಾರಣಿಗಳು ಎಂದರೆ ಜನರು ಅಸಹ್ಯವಾಗಿ ನೋಡುವಂತಾಗಿದೆ. ಇದನ್ನು ಹೋಗಲಾಡಿಸಲು ಉತ್ತಮ ಆಡಳಿತ ನೀಡುವುದೇ ನಮ್ಮ ಉದ್ದೇಶ. ಕಾಂಗ್ರೆಸ್‌ ಇದ್ದಾಗ 10 ಪರ್ಸೆಂಟ್‌ ಇದ್ದ ಕಮೀಷನ್‌ ಈಗ 40 ಪರ್ಸೆಂಟ್‌ ಆಗಿದೆ ಎಂದು ಆರೋಪಿಸಿದರು.

ಮರಾಠಿ-ತೆಲುಗು ಭಾಷಿಕರೂ ನಮ್ಮ ದೇಶದವರೇ: ಬೆಳಗಾವಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷ ಕಟ್ಟಲು ಬಂದಿದ್ದೇನೆ. ಬೆಳಗಾವಿ ಜನರು ನಮ್ಮ ಮೇಲೆ ಪ್ರೀತಿ ಜಾಸ್ತಿ ಇಟ್ಟಿದ್ದಾರೆ. ಇನ್ನೂ ಸಮಯಾವಕಾಶ ಇದೆ. ಬೆಳಗಾವಿಯ ಎಂಇಎಸ್‌ ನಾಯಕ ದೀಪಕ ದಳವಿ ಸೇರಿದಂತೆ ಮರಾಠಿ ಭಾಷಿಕ ಜನರ ಸಂಪರ್ಕದಲ್ಲಿ ಇದ್ದೇನೆ. ವೈಯಕ್ತಿಕವಾಗಿ ಅವರೊಂದಿಗೆ ನನ್ನ ಸಂಬಂಧ ಇದೆ. ಮರಾಠಿ-ತೆಲುಗು ಮಾತನಾಡುವವರು ನಮ್ಮ ದೇಶದವರೇ ಅಲ್ವಾ ಎಂದು ಭಾಸ್ಕರರಾವ್‌ ಹೇಳಿದರು.

ಎರಡೂ ಪಕ್ಷಗಳಿಗಿಲ್ಲ ನೈತಿಕತೆ: ಆಶ್ವಾಸನೆ ಮೇರೆಗೆ 108 ಕಾಮಗಾರಿಗಳನ್ನು ಗುತ್ತಿಗೆದಾರ ಸಂತೋಷ ಪಾಟೀಲ ಮಾಡಿದ್ದಾರೆ. ಅವರ ಕೆಲಸಕ್ಕೆ ಅನುಮೋದನೆ ನೀಡದೆ ಸತಾಯಿಸಿದಾಗ ತನ್ನ ಜೀವ ನೀಡಿದ್ದಾರೆ. ಕಾಮಗಾರಿ ಆರಂಭ ಬಳಿಕ ಆ ಕ್ಷೇತ್ರದ ಪ್ರತಿಯೊಬ್ಬರಿಗೂ ಇದು ಗೊತ್ತಿರುತ್ತದೆ. ಎರಡೂ ಪಕ್ಷದವರಿಗೂ ಈ ವಿಷಯ ಗೊತ್ತಿರುತ್ತದೆ. ಆಮ್‌ ಆದ್ಮಿ ಪಕ್ಷಕ್ಕೆ ಮಾತ್ರ ಇದರ ಬಗ್ಗೆ ಮಾತ ನಾಡಲು ನೈತಿಕ ಹಕ್ಕಿದೆ. ಎರಡೂ ಪಕ್ಷಗಳಿಗೂ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್‌ ಭ್ರಷ್ಟಾಚಾರ ಹುಟ್ಟಿಸಿದೆ. ಅದರ ಫಲಾನುಭವಿ ಬಿಜೆಪಿ ಆಗಿದೆ ಎಂದರು ಭಾಸ್ಕರರಾವ್‌.

Advertisement

Udayavani is now on Telegram. Click here to join our channel and stay updated with the latest news.

Next