ಹೊಸದಿಲ್ಲಿ: ದೆಹಲಿ ಆಡಳಿತಾತ್ಮಕ ಸೇವೆಗಳ ವಿಧೇಯಕ ವಿಚಾರದಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಮ್ ಆದ್ಮಿ ಪಕ್ಷಕ್ಕೆ ಲೋಕಸಭಾ ಕಲಾಪದಲ್ಲಿ ತಿರುಗೇಟು ನೀಡಿದ್ದು, ದೆಹಲಿಯ ಬಗ್ಗೆ ಯೋಚಿಸಿ ಹೊರತು ಮೈತ್ರಿ ಕೂಟದ ಬಗ್ಗೆ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕಲಾಪದಲ್ಲಿ ಮಾತನಾಡಿದ ಶಾ, “ನೀವು ಮೈತ್ರಿ ಮಾಡಿಕೊಂಡಿದ್ದೀರಿ ಎಂಬ ಕಾರಣಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ ಎಂದು ನಾನು ಪಕ್ಷಗಳಿಗೆ ಮನವಿ ಮಾಡುತ್ತೇನೆ. ಏಕೆಂದರೆ ಮೈತ್ರಿಯ ಹೊರತಾಗಿಯೂ, ಪ್ರಧಾನಿ ಮೋದಿ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆಲ್ಲುತ್ತಾರೆ” ಎಂದರು.
ಹೊಸ ರಾಜಕೀಯ ಮೈತ್ರಿಗಳನ್ನು ರಚಿಸಲು ಹಲವು ಮಾರ್ಗಗಳಿವೆ, ದೇಶದ ಒಳಿತಿಗಾಗಿ ಮಸೂದೆಗಳು ಮತ್ತು ಕಾನೂನುಗಳನ್ನು ತರಲಾಗುತ್ತದೆ. ದೇಶ ಮತ್ತು ದೆಹಲಿಯ ಒಳಿತಿಗಾಗಿ ಇದನ್ನು ಬೆಂಬಲಿಸಬೇಕು ಎಂದು ಆಮ್ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಿದರು.
”ಈ ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿಯೇ ಇದೆ. ಅದು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ ಎಂದು ಹೇಳುತ್ತದೆ. ದೆಹಲಿಗೆ ಕಾನೂನು ಮಾಡಲು ಕೇಂದ್ರಕ್ಕೆ ಅವಕಾಶ ನೀಡುವ ನಿಬಂಧನೆಗಳು ಸಂವಿಧಾನದಲ್ಲಿವೆ” ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
“2015 ರಲ್ಲಿ, ದೆಹಲಿಯಲ್ಲಿ ಪಕ್ಷವೊಂದು ಅಧಿಕಾರಕ್ಕೆ ಬಂತು, ಅದರ ಏಕೈಕ ಉದ್ದೇಶವೆಂದರೆ ಹೋರಾಟ, ಸೇವೆ ಅಲ್ಲ. ಅವರಿಗೆ ವರ್ಗಾವಣೆ, ಪೋಸ್ಟಿಂಗ್ ಮಾಡುವುದು ಸಮಸ್ಯೆಯಾಯಿತು. ತಮ್ಮ ಬಂಗಲೆಗಳನ್ನು ನಿರ್ಮಿಸುವಂತಹ ಭ್ರಷ್ಟಾಚಾರವನ್ನು ಮರೆಮಾಡಲು ವಿಜಿಲೆನ್ಸ್ ಇಲಾಖೆಯ ನಿಯಂತ್ರಣ ತೊಂದರೆಯಾಯಿತು” ಎಂದು ಶಾ ವಾಗ್ದಾಳಿ ನಡೆಸಿದರು.