ಮಂಗಳೂರು ಮಹಾನಗರ ಪಾಲಿಕೆ ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಹಾಗೂ ಮಂಗಳೂರು ಮಹಾನಗರ ಪಾಲಿಕೆ ನೈಮರ್ಲಿಕರಣ ಮತ್ತು ಘನತ್ಯಾಜ್ಯವಸ್ತುಗಳ ಬೈಲಾ 2018 ಪ್ರಕಾರ 10,000 ರೂ. ನಿಂದ 25,000 ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಪ್ರಕಟನೆಯಲ್ಲಿ ಎಚ್ಚರಿಸಿದೆ. ಈ ನಿಯಮ ಈಗಾಗಲೇ ಜಾರಿಯಲ್ಲಿದ್ದರೂ ರಸ್ತೆ ಬದಿಯಲ್ಲಿ, ಚರಂಡಿಗಳಲ್ಲಿ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಹಲವಾರು ಸಂಘಸಂಸ್ಥೆಗಳು ಸ್ವಚ್ಛತಾ ಅಭಿಯಾನ ನಡೆಸಿ ಇವುಗಳನ್ನು ತೆರವುಗೊಳಿಸಿದರೂ ಕೆಲವೇ ದಿನಗಳಲ್ಲಿ ಮತ್ತೆ ಅಲ್ಲಿ ತ್ಯಾಜ್ಯಗಳು ರಾಶಿ ಬೀಳುತ್ತವೆ. ಸ್ವಚ್ಛತೆ ಬಗ್ಗೆ ಕಳೆದ ಹಲವು ವರ್ಷಗಳಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೂ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಎಸೆಯುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಈ ಹಿನ್ನ್ನೆಲೆಯಲ್ಲಿ ಜಾಗೃತಿಯ ಜತೆಗೆ ಕಾನೂನು ಕ್ರಮಗಳನ್ನು ಕೂಡ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲೂ ಪರಿಣಾಮಕಾರಿ ಕ್ರಮಗಳು ಆಗಬೇಕಾಗಿದೆ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಹಾಕುವ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆ್ಯಪ್ ಹಾಗೂ ಮಾರ್ಷಲ್ ವ್ಯವಸ್ಥೆಯನ್ನು ರೂಪಿಸಿದೆ. ತ್ಯಾಜ್ಯ ಎಸೆಯುವವರಿಗೆ ಹಾಗೂ ವಿಂಗಡನೆ ಮಾಡದವರಿಗೆ ದಂಡ ವಿಧಿಸುವ ಅಧಿಕಾರವನ್ನು ಮಾರ್ಷಲ್ಗಳಿಗೆ ನೀಡಲಾಗುತ್ತದೆ. ಇವರಿಗೆ ಟ್ರಾಫಿಕ್ ಪೊಲೀಸ್ ಮಾದರಿಯಲ್ಲಿ ಸ್ಥಳದಲ್ಲೇ ದಂಡ ಹಾಕುವ ಎಲೆಕ್ಟ್ರಾನಿಕ್ ಯಂತ್ರವನ್ನು ಒದಗಿಸಲಾಗುವುದು.
ಪ್ರತಿ ಒಂದು ವಾರ್ಡ್‌ಗೆ ಒಬ್ಬರಂತೆ 198 ಹಾಗೂ ಹೆಚ್ಚುವರಿಯಾಗಿ 35 ಮಾರ್ಷಲ್ಗಳನ್ನು ನೇಮಿಸಲಾಗುತ್ತದೆ. ಈ ಮಾರ್ಷಲ್ಗಳನ್ನು ನೇರವಾಗಿ ಸೈನಿಕ್ ಕಲ್ಯಾಣ ಇಲಾಖೆಯಿಂದ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ ಕ್ಲೀನ್ ಅಪ್ ಮಾರ್ಷಲ್, ಜೂನಿಯರ್ ಕಮಿಷನ್ ಅಧಿಕಾರಿ ಹಾಗೂ ಉಪಮುಖ್ಯ ಅಧಿಕಾರಿ ಎಂಬ ಮೂರು ಶ್ರೇಣಿಯ ಅಧಿಕಾರಿಗಳಿರುತ್ತಾರೆ. ಕ್ಲಿನ್ ಅಪ್ ಮಾರ್ಷಲ್, ಜೂನಿಯರ್ ಕಮಿಷನ್ ಹಾಗೂ ಉಪಮುಖ್ಯ ಅಧಿಕಾರಗಳನ್ನು ರಾಜ್ಯ ಸೈನಿಕ ಕಲ್ಯಾಣ ಇಲಾಖೆ ಹಾಗೂ ರೀ ಸೆಟಲ್ಮೆಂಟ್ ಇಲಾಖೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು 4 ಜಿ ವಿನಾಯತಿ ನೀಡಲಾಗಿದೆ. ಇದರಿಂದ ಟೆಂಡರ್ ಆಹ್ವಾನ ನೀಡದೆ ಸೈನಿಕ ಕಲ್ಯಾಣ ಮೂಲಕ ನೇರವಾಗಿ ನೇಮಕಾತಿ ಮಾಡಿಕೊಳ್ಳ ಬಹುದಾಗಿದೆ. ಎರಡು ವರ್ಷದ ಅವಧಿಗೆ ನಿವೃತ್ತ ಸೇನಾ ಸಿಬಂದಿಯನ್ನು ಸೇವೆಗೆ ಬಿಬಿಎಂಪಿ ಪಡೆದುಕೊಳ್ಳಲಿದೆ.
ಕಡಿವಾಣ ಅಗತ್ಯ
Advertisement
ಆ್ಯಪ್, ಮಾರ್ಷಲ್ ವ್ಯವಸ್ಥೆ
Related Articles
Advertisement
ನಗರದಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಮಹಾನಗರ ಪಾಲಿಕೆ ಮುಂಬಯಿ ಮೂಲದ ಆ್ಯಂಟನಿ ವೇಸ್ಟ್ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆಯನ್ನು ಗುತ್ತಿಗೆ ವಹಿಸಿಕೊಟ್ಟು ಕೋಟ್ಯಂತರ ರೂ. ವಿನಿಯೋಗಿಸುತ್ತಿದೆ. ಮನೆಮನೆ ಕಸ ಸಂಗ್ರಹ ನಡೆಯುತ್ತಿದೆ. ಆದರೆ ರಾತ್ರಿ ಹಾಗೂ ಬೆಳಗ್ಗೆ ವಾಹನಗಳಲ್ಲಿ ತರುವ ತ್ಯಾಜ್ಯಗಳನ್ನು ರಸ್ತೆ ಬದಿ, ಚರಂಡಿ, ತೋಡು ಹಾಗೂ ಹೊಳೆಗಳಲ್ಲಿ ತಂದು ಹಾಕುವ ಕೃತ್ಯಗಳು ನಡೆಯುತ್ತಿವೆ. ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ತಂದು ಹಾಕಿ ಬೆಂಕಿ ಕೊಡಲಾಗುತ್ತಿದೆ. ಇದರಲ್ಲಿ ಕೆಲವು ಆಪಾಯಕಾರಿ, ರಾಸಾಯನಿಕ ವಸ್ತುಗಳು, ಪ್ರಾಣಿ, ಕಟ್ಟಡ ತ್ಯಾಜ್ಯಗಳು ಒಳಗೊಂಡಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.
ಆಸುಪಾಸಿನ ನಿವಾಸಿಗಳು, ರಸ್ತೆಗಳಲ್ಲಿ ಸಂಚರಿಸುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಜೆ. ಕೃಷ್ಣ ಪಾಲೆಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕಸ ಹಾಕುವ ವಾಹನಗಳು, ವ್ಯಕ್ತಿಗಳ ಫೋಟೋ ತೆಗೆದು ಕಳುಹಿಸಿದರೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ನಗರ ಬೆಳೆಯುತ್ತಿದೆ. ಅದರ ಜತೆಗೆ ಒಂದಷ್ಟು ಸಮಸ್ಯೆಗಳು ಕೂಡ ಸೃಷ್ಟಿಯಾಗುತ್ತಿವೆ. ತ್ಯಾಜ್ಯಗಳನ್ನು ಬೇಕಾಬಿಟ್ಟಿಯಾಗಿ ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ಎಸೆಯುವ ಸಮಸ್ಯೆ ಒಂದಾಗಿದೆ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಜಾರಿಯಾಗಲಿರುವ ಮಾರ್ಷಲ್, ಆ್ಯಪ್ ಮಾದರಿಯಲ್ಲೇ ಒಂದಷ್ಟು ಪರಿಣಾಮಕಾರಿ ವ್ಯವಸ್ಥೆಗಳು ಅನುಷ್ಠಾನಗೊಳ್ಳುವುದು ಅವಶ್ಯ.
ರಸ್ತೆ ಬದಿಗಳಲ್ಲಿ , ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದು ಸ್ವಚ್ಛ ನಗರ ಪರಿಕಲ್ಪನೆಗೆ ಪ್ರಸ್ತುತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆ ವತಿಯಿಂದ ಕ್ರಮಗಳಾಗುತ್ತಿದ್ದರೂ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ. ಈ ಹಿನ್ನ್ನೆಲೆಯಲ್ಲಿ ಇದನ್ನೊಂದು ಸಾಮಾಜಿಕ ಅಪರಾಧವಾಗಿ ಪರಿಗಣಿಸಿ ಇದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕಠಿನ ಕ್ರಮಗಳನ್ನು ಕೈಗೊಳ್ಳುವುದು ಸಾರ್ವಜನಿಕರ ಆರೋಗ್ಯ ಮತ್ತು ನಗರ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಅತಿ ಅವಶ್ಯವಾಗಿದೆ.
ಆ್ಯಪ್ ಆಧಾರಿತ ಕಣ್ಗಾವಲು
ಬಿಬಿಎಂಪಿ ಮಾರ್ಷಲ್ಗಳಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿ ಪಡಿಸಿದೆ. ಮಾರ್ಷಲ್ಗಳು ಕಸ ಎಸೆಯುವವರನ್ನು ಹಿಡಿದಾಗ ಅವರ ಭಾವಚಿತ್ರ, ವಾಹನ ಚಿತ್ರದ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕಾಗುತ್ತದೆ. ಕಸ ಸುರಿಯುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದಾಗ ಕೂಡಲೇ ಸಂಬಂಧಪಟ್ಟ ವಾರ್ಡ್ ನ ಮಾರ್ಷಲ್ಗೆ ಸಂದೇಶ ಹೋಗುತ್ತದೆ.
ರಾಜಕಾಲುವೆಗಳಲ್ಲಿ ತ್ಯಾಜ್ಯ ಎಸೆಯುವವರು ಮತ್ತು ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವುದನ್ನು ತಡೆಯಲು ಯತ್ನಿಸುವವರ ವಿರುದ್ಧ ಐಪಿಸಿ ಸೆಕ್ಷನ್ 341ರ ಅನ್ವಯ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಈ ಕಾಯ್ದೆಯನ್ವಯ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ತಡೆಯೊಡ್ಡಿದರೆ 5 ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಕಾಯ್ದೆ ಕೆರೆಗಳ ಮಲೀನಗೊಳಿಸುವುದಕ್ಕೆ ಅನ್ವಯಿಸುತ್ತದೆ. ಈ ಕಾಯ್ದೆಯನ್ವಯ ಬೆಂಗಳೂರಿನಲ್ಲಿ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ತಡೆಯೊಡ್ಡುವವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.
– ಕೇಶವ ಕುಂದರ್