ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲಾಗುವುದು ಎಂದು ಪಕ್ಷದ ವಲಯ ಸಂಚಾಲಕ ಕೆ.ದಿವಾಕರ್ ಹೇಳಿದರು.
ಆಮ್ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಅಂಗವಾಗಿ ನಗರದ ಸಂತ ಥಾಮಸ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷದ ಅಭ್ಯರ್ಥಿಯನ್ನು ಶಿವಮೊಗ್ಗದ ಪ್ರಜ್ಞಾವಂತರು ಗೆಲ್ಲಿಸುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಆಪ್ ಖಾತೆ ತೆರೆಯಲಿದೆ. ಇದಕ್ಕಾಗಿ ಸಂಘಟನೆ ಮಾಡಲಾಗುತ್ತಿದೆ. ಪಕ್ಷಕ್ಕೆ ಶಿವಮೊಗ್ಗ ಹೊಸದಲ್ಲ. 2023ರ ಚುನಾವಣೆಯಲ್ಲಿ ಸ್ವಜನ ಪಕ್ಷಪಾತ, ಪಸೆಂìಟೇಜ್ ರಾಜಕಾರಣ ಮಾಡಿದವರಿಗೆ ಮತದಾರರು ಬುದ್ಧಿ ಕಲಿಸಲಿದ್ದಾರೆ ಎಂದರು. ಎಂಟು ವರ್ಷಗಳ ಹಿಂದೆ ದೇಶದಲ್ಲಿ ಮೋದಿಯ ಹೆಸರಿನ ಪರ ಘೋಷಣೆಗಳನ್ನು ಕೂಗಲಾಗುತಿತ್ತು. ಆದರೆ, ಪಂಜಾಬ್ ಚುನಾವಣೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹೀಗಾಗಿ, ಅರವಿಂದ್ ಕೇಜ್ರಿವಾಲ್ ಭವಿಷ್ಯದ ಪ್ರಧಾನಿ ಆಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಜನಾಭಿಪ್ರಾಯ ರೂಪಿಸುವ ಮತ್ತು ಸಂಘಟನೆ ದೃಷ್ಟಿಯಿಂದ ಬೃಹತ್ ಸಮಾವೇಶ ಮಾಡಲಾಗುವುದು. ಅದರಲ್ಲಿ ಕೇಜ್ರಿವಾಲ್ ಸೇರಿದಂತೆ ಎಲ್ಲ ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಜನರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಪಂಜಾಬ್ ಚುನಾವಣೆಗೂ ಮುನ್ನ ಪಕ್ಷ ಹಲವು ಸಭೆಗಳನ್ನು ಆಯೋಜಿಸಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜನ ಆಗಮಿಸಿರಲಿಲ್ಲ. ಆದರೆ ಹತ್ತು ತಿಂಗಳ ನಿರಂತರ ಸಭೆಯ ಫಲಿತಾಂಶ ಸಾರ್ವಜನಿಕರ ಎದುರುಗಡೆ ಇದೆ. ಕರ್ನಾಟಕದಲ್ಲೂ ಬದಲಾವಣೆಯ ಅಗತ್ಯವಿದೆ ಎಂದರು.
ಪಕ್ಷದ ಪ್ರಮುಖರಾದ ಎಚ್.ರವಿಕುಮಾರ್, ಪ್ರಕಾಶ್, ವಿ.ಗೋಪಾಲ್ ಇತರರಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.