Advertisement

ಇತಿಹಾಸ ನಿರ್ಮಿಸಿದ ಮನಾಲಿ ಸುಂದರಿ

11:42 AM Jan 11, 2018 | |

ಟರ್ಕಿ: ಎಫ್ಐಎಸ್‌ ಅಂತಾರಾಷ್ಟ್ರೀಯ ಮಹಿಳಾ ಸ್ಕೀಯಿಂಗ್‌ ಸ್ಪರ್ಧೆಯಲ್ಲಿ ಭಾರತದ ಆಂಚಲ್‌ ಠಾಕೂರ್‌ ಇತಿಹಾಸ ನಿರ್ಮಿಸಿದ್ದಾರೆ. ಟರ್ಕಿಯಲ್ಲಿ ಕಂಚಿನ ಪದಕ ಗೆದ್ದಿರುವ ಇವರು ಇದೇ ಮೊದಲ ಬಾರಿಗೆ ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುಕೊಟ್ಟಿದ್ದಾರೆ.
ಜತೆಗೆ ಇದು ಅವರ ವೃತ್ತಿ ಜೀವನದ ಮೊದಲ ಅಂತಾರಾಷ್ಟ್ರೀಯ ಪದಕ ಎನ್ನುವುದು ವಿಶೇಷ.

Advertisement

ಯಾರಿದು ಆಂಚಲ್‌?: ಆಂಚಲ್‌ ಠಾಕೂರ್‌ ಮೂಲತಃ ಹಿಮಾಚಲ ಪ್ರದೇಶದ ಮನಾಲಿಯವರು. ಅವರಿಗೆ 21 ವರ್ಷ. ಅವರ ತಂದೆ ರೋಶನ್‌ ಠಾಕೂರ್‌. ಅವರು ಭಾರತೀಯ ವಿಂಟರ್‌ಗೆಮ್ಸ್‌ ಫೇಡರೇಷನ್‌ನ ಪ್ರಧಾನ ಕಾರ್ಯದರ್ಶಿ. ಇವರು ಮಾಜಿ ಒಲಿಂಪಿಯನ್‌ ಹೀರಾ ಲಾಲ್‌ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ. ಆಸ್ಟ್ರೀಯಾದಲ್ಲಿ 2012ರಲ್ಲಿ ನಡೆದ ವಿಂಟರ್‌ ಯೂತ್‌ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಇವರು ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲ 2017ರಲ್ಲಿ ಜಪಾನ್‌ ಆತಿಥ್ಯದಲ್ಲಿ ನಡೆದ ಏಷ್ಯನ್‌ ವಿಂಟರ್‌ ಗೇಮ್ಸ್‌ನಲ್ಲೂ ಇವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಯಾವ ವಿಭಾಗದಲ್ಲಿ ಆಂಚಲ್‌ಗೆ ಪದಕ?: ಅಲ್ಫಿನೆ ಇಜೆxರ್‌ 3200 ಕಪ್‌ನ ಸ್ಲಾಲೊಮ್‌ ರೇಸ್‌ ವಿಭಾಗದಲ್ಲಿ ಇವರು ಸ್ಪರ್ಧೆ ಮಾಡಿದ್ದರು. ಅತ್ಯುತ್ತಮ ನಿರ್ವಹಣೆ ನೀಡುವ ಮೂಲಕ ಇವರು ಕೊನೆಯ ಕ್ಷಣದಲ್ಲಿ ಪದಕ ಗೆದ್ದರು.

ಸ್ಕೀಯಿಂಗ್‌ ಎಂದರೇನು?
ಇದೊಂದು ಚಳಿಗಾಲದ ಕ್ರೀಡೆ. ಪಾದಗಳಿಗೆ ಸ್ಕೀಗಳನ್ನು ಕಟ್ಟಿಕೊಂಡು (ಹಿಮದ ಮೇಲೆ ಸಲೀಸಾಗಿ ಜಾರಬಲ್ಲ ಉದ್ದನೆಯ ಪಟ್ಟಿ) ಹಿಮರಾಶಿಯ ಮೇಲೆ ಜಾರುತ್ತಾ ಹೋಗುವುದು. ಕೈಗಳಲ್ಲಿ ಎರಡು ಉದ್ದನೆಯ ಕೋಲುಗಳನ್ನು ಹಿಡಿತ ಸಾಧನವಾಗಿ ಬಳಸಲಾಗುತ್ತದೆ.

ಅನಿರೀಕ್ಷಿತ ಪದಕ
ಪದಕ ಗೆಲ್ಲುವೆ ಎಂದು ಕೂಟಕ್ಕೂ ಮೊದಲು ನಾನು ಅಂದುಕೊಂಡೇ ಇರಲಿಲ್ಲ. ಕೊನೆಯ ಕ್ಷಣದಲ್ಲಿ ಮ್ಯಾಜಿಕ್‌ ನಡೆಯಿತು. ಪದಕ ಗೆದ್ದೆ ಎನ್ನುವುದನ್ನು ನಂಬಲು ಸಾಧ್ಯವೇ ಆಗಲಿಲ್ಲ. ಕಠಿಣ ಪರಿಶ್ರಮಕ್ಕೆ ದೊರಕಿದ ಜಯ ಎಂದು ಗೆಲುವಿನ ಬಳಿಕ ಆಂಚಲ್‌ ಪ್ರತಿಕ್ರಿಯಿಸಿದರು. ಆಂಚಲ್‌ 4 ವರ್ಷದವಳಾಗಿದ್ದಾಗಲೇ ಸ್ಕೀಯಿಂಗ್‌ ಅಭ್ಯಾಸ ಆರಂಭಿಸಿದ್ದರು . ಆದರೆ ಸರ್ಕಾರದಿಂದ ಅವರಿಗೆ ಸೂಕ್ತ ಬೆಂಬಲ ಸಿಕ್ಕಿರಲಿಲ್ಲ. ಇನ್ನಾದರೂ ಅವಳಿಗೆ ಸರ್ಕಾರ ನೆರವು ದೊರಕಬಹುದು ಎನ್ನುವ ವಿಶ್ವಾಸವನ್ನು ಅವರ ತಂದೆ ರೋಶನ್‌ ಠಾಕೂರ್‌ ತಿಳಿಸಿದ್ದಾರೆ. 

Advertisement

ವೆಲ್‌ಡನ್‌ ಆಂಚಲ್‌…ಮೊದಲ ಪದಕ ಗೆದ್ದು ದೇಶ ಹೆಮ್ಮೆ ಪಡುವ ಸಾಧನೆ ಮಾಡಿದ್ದೀರಿ. ನಿಮ್ಮ ಮುಂದಿನ ಎಲ್ಲ ಪ್ರಯತ್ನಗಳಿಗೆ ಜಯವಾಗಲಿ.
 ● ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಮೊದಲ ಸಲ ಸ್ಕೀಯಿಂಗ್‌ನಲ್ಲಿ ಪದಕ ಗೆದ್ದು ಖಾತೆ ಆರಂಭಿಸಿರುವ ಆಂಚಲ್‌ಗೆ ಅಭಿನಂದನೆಗಳು. ಒಳ್ಳೆಯದಾಗಲಿ. ಇನ್ನಷ್ಟು ಸಾಧನೆಗಳು ನಿಮ್ಮಿಂದ ಸಾಧ್ಯವಾಗಲಿ.
 ● ರಾಜವರ್ಧನ್‌ ಸಿಂಗ್‌ ರಾಥೋಡ್‌, ಕೇಂದ್ರ ಕ್ರೀಡಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next